ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಹಾಗೂ ರೈತ ಸಂಘಟನೆಗಳು ಜಂಟಿಯಾಗಿ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿ ನಿವಾಸಿ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ಆಸ್ಪತ್ರೆಯ ಮೇಲ್ಛಾವಣಿ ಕುಸಿತ ನಿಜಕ್ಕೂ ಜನರಲ್ಲಿ ಆತಂಕ ಸೃಷ್ಟಿಸಿದೆ. ದಾವಣಗೆರೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಸಾವಿರಾರು ಸಂಖ್ಯೆಯ ಕೆಳ ಮಧ್ಯಮ ವರ್ಗದವರಿಗೆ ಬಡ ಜನರಿಗೆ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸುವುದರಲ್ಲಿ ಆಸರೆಯಾಗಿರುವ ಜಿಲ್ಲಾ ಚಿಗಟೇರಿ ಆಸ್ಪತ್ರೆಯು ಈಗಾಗಲೇ ಬಹುತೇಕ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸರಿಯಾದ ಚಿಕಿತ್ಸೆಯಿಲ್ಲದ ಈ ಆಸ್ಪತ್ರೆಯು ಸಿಬ್ಬಂದಿಗಳ, ಉಪಕರಣಗಳ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸುಮಾರು ಅರ್ಧ ಶತಮಾನದ ಹಳೆಯದಾದ ಈ ಆಸ್ಪತ್ರೆಯ ಮೇಲ್ಛಾವಣಿ ಕುಸಿತಗೊಂಡಿರುವುದು ನಿಜಕ್ಕೂ ಆತಂಕಕಾರಿಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಮೇಲ್ಛಾವಣಿ ಕುಸಿತ ಘಟನೆಯಿಂದ ಆಸ್ಪತ್ರೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದ್ದರಿಂದ ಕೂಡಲೇ ಇದನ್ನು ಸಂಬಂಧಪಟ್ಟವರಿಂದ ದುರಸ್ಥಿಗೊಳಿಸಬೇಕು ಹಾಗೂ ಹೊಸ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
“ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾಸ್ಪತ್ರೆಯ ಕಟ್ಟಡವನ್ನು ಕೂಡಲೇ ದುರಸ್ಥಿಗೊಳಿಸಿ ಒಳರೋಗಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ, ಸುಸಜ್ಜಿತವಾದ ಹೊಸದಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ನಿರ್ಮಿಸಿ, ಒಳ ಹಾಗೂ ಹೊರ ರೋಗಿಗಳಿಗೆ ಎಲ್ಲ ರೀತಿಯ ಔಷಧೋಪಚಾರಗಳು ಆಸ್ಪತ್ರೆಯೊಳಗೆ ಸಿಗುವಂತೆ ವ್ಯವಸ್ಥೆ ಮಾಡಿ ಮತ್ತು ಔಷಧಿಗಳಿಗಾಗಿ ಹೊರಗಡೆ ಚೀಟಿ ಬರೆದುಕೊಡುವವರ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಜಿಲ್ಲಾಸ್ಪತ್ರೆಗೆ ಆಗತ್ಯವಿರುವಷ್ಟು ನುರಿತ ವೈದ್ಯರನ್ನು ಹಾಗೂ ಆರೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಬೇಕು. ಆಸ್ಪತ್ರೆಯ ಒಳಗೂ ಹಾಗೂ ಹೊರಗೂ ಸ್ವಚ್ಚತೆ ಕಾಪಾಡುವಂತೆ ಕ್ರಮ ವಹಿಸಬೇಕು. ಆಸ್ಪತ್ರೆಯಲ್ಲಿರುವ ವಾರ್ಡ್‌ಗಳಲ್ಲಿ ಸುಸಜ್ಜಿತವಾದ ಶೌಚಾಲಯ ವ್ಯವಸ್ಥೆ ಕಲ್ಲಿಸಬೇಕು. ಆಸ್ಪತ್ರೆಯಲ್ಲಿ ಸಮರ್ಪಕ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ: ಸಚಿವ ಪರಮೇಶ್ವರ್
ಮಂಜುನಾಥ್ ಕೈದಾಳೆ, ರೈತ ಸಂಘಟನೆಯ ಬುಳ್ಳಾಪರದ ಹನುಮಂತಪ್ಪ, ಎಂ ಆರ್ ಹಿರೇಮಠ ಮಂಜುನಾಥ್ ಕುಕ್ಕುವಾಡ, ಟಿವಿಎಸ್ ರಾಜು, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಭಾರತಿ, ಪರಶುರಾಮ್, ಹರಿಪ್ರಸಾದ್, ಗುರು, ಮಮತಾ, ಪೂಜಾ, ಕಾವ್ಯ, ಕವಿತಾ, ಸುಮನ್ ಸೇರಿದಂತೆ ಬಹುತೇಕರು ಇದ್ದರು.
