ವಿವಾಹೇತರ ಸಂಬಂಧದ ಶಂಕೆ ಆರೋಪದ ಹಿನ್ನಲೆಯಲ್ಲಿ ವಿಚಾರಣೆ ವೇಳೆ ಮಸೀದಿ ಮುಂಬಾಗದಲ್ಲಿಯೇ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಅನೈತಿಕ ಪೊಲೀಸ್ ಗಿರಿ ನೆನಪಿಸುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯಲ್ಲಿ ನೆಡೆದಿದೆ.
ತಾವರಕೆರೆ ಗ್ರಾಮದಲ್ಲಿ ಮಸೀದಿ ಮುಂಬಾಗದಲ್ಲಿ ವಿವಾಹೇತರ ಸಂಬಂಧದ ಕುರಿತು ಪಂಚಾಯ್ತಿ ನಡೆಸುವ ವೇಳೆ ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪಂಚಾಯ್ತಿ ಮಾಡಲು ಅವರ ಸಂಬಂಧಿ ಮತ್ತು ಸ್ನೇಹಿತನ್ನು ಮಸೀದಿಗೆ ಕರೆಸಿದ್ದರು. ಆಗ ಕಮಿಟಿಯ ಕೆಲವರು ಮಹಿಳೆಯನ್ನು ನಡುರಸ್ತೆಗೆ ಎಳೆದುತಂದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಪೈಪ್, ದೊಣ್ಣೆಗಳಿಂದ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಲು ಪ್ರಯತ್ನಿಸಿರುವ ದೃಶ್ಯಗಳು ದಾಖಲಾಗಿವೆ. ಏಪ್ರಿಲ್ 9ರಂದು ಘಟನೆ ನೆಡೆದಿದ್ದು, ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ದೂರು ನೀಡಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನಂತೆ ಏಪ್ರಿಲ್ 11ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಲ್ಲೆ ನಡೆಸಿರುವ ಮೊಹಮ್ಮದ್ ನಯಾಜ್, ಮೊಹಮ್ಮದ್ ಗೌಸ್ ಪೀರ್, ಚಾಂದ್ ಪೀರ್, ಇನಾಯಿತ್ ಉಲ್ಲಾ, ದಸ್ತಗೀರ್ ಹಾಗೂ ರಸೂಲ್ ಟಿ ಆರ್ ಎಂಬುವವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣ ಏ.9ರಂದೇ ನಡೆದಿದ್ದು, ಹಲ್ಲೆ ಮಾಡಿದ ವಿಡಿಯೋವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಮಹಿಳೆ ಏ.11ರಂದು ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚಿಗಟೇರಿ ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ದಿಡೀರ್ ಭೇಟಿ, ಪರಿಶೀಲನೆ, ವ್ಯವಸ್ಥೆ ಬಗ್ಗೆ ಅಸಮಾಧಾನ.
ದೂರಿನ ಸಾರಾಂಶ: “ನಮ್ಮ ಮನೆಗೆ ದೂರದ ಸಂಬಂಧಿ ಬಂದು ಉಳಿದಿದ್ದಳು. ಅವಳನ್ನು ಭೇಟಿ ಮಾಡಲು ಆಕೆಯ ಸ್ನೇಹಿತ ಬಂದಿದ್ದು, ಜೊತೆಯಲ್ಲಿದ್ದಿದ್ದನ್ನು ನೋಡಿ ತನ್ನ ಗಂಡ ಗಲಾಟೆ ಮಾಡಿದ್ದರು. ನಂತರ ತಾವರೆಕೆರೆಯ ಮಸೀದಿಗೆ ದೂರು ನೀಡಿದ್ದು, ಮರುದಿನ ಮಧ್ಯಾಹ್ನ ಪಂಚಾಯ್ತಿಗಾಗಿ ತನ್ನನ್ನೂ ಸೇರಿದಂತೆ ಸಂಬಂಧಿ ಮಹಿಳೆ ಮತ್ತು ಸ್ನೇಹಿತನನ್ನು ಕರೆದುಕೊಂಡು ಹೋಗಿ ಮಾತುಕತೆ ನಡೆಸುವ ವೇಳೆ ಅಲ್ಲಿದ್ದ ಆರೋಪಿಗಳು ಪೈಪ್ ಮತ್ತು ದೊಣ್ಣೆಗಳಿಂದ ಮನಬಂದಂತೆ ಮೂವರಿಗೂ ಥಳಿಸಿದರು. ನಮ್ಮ ಬಟ್ಟೆಗಳನ್ನು ಎಳೆದಾಡಿ ಹರಿದು ಹಾಕಿದ್ದಲ್ಲದೇ, ಕೊಲೆ ಬೆದರಿಕೆ ಹಾಕಿದ್ದಾರೆ” ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.