ಒಳಮೀಸಲಾತಿಗಾಗಿ ಮಾದಿಗ-ಛಲವಾದಿ ಸಮಾಜ ಒಗ್ಗೂಡಿ ಹೋರಾಟ ಹಮ್ಮಿಕೊಂಡಿದ್ದು, ರಾಜ್ಯದ ಮತ್ತು ದೇಶದ ಒಳಮೀಸಲಾತಿ ಹೋರಾಟದ ರೂಪುರೇಷೆಗಳನ್ನು ಬದಲಿಸಬಹುದೇ, ಈ ನಿಟ್ಟಿನಲ್ಲಿ ಅಭೂತಪೂರ್ವ ಯಶಸ್ಸಿಗೆ ಮುನ್ನುಡಿ ಬರೆಯಬಲ್ಲದೇ ಎಂಬ ಆಶಾಭಾವನೆ ಪರಿಶಿಷ್ಟ ಜಾತಿಗಳ ವಲಯದಲ್ಲಿ ಚಿಗುರೊಡೆದಿದೆ. ಇದು ರಾಜ್ಯ, ರಾಷ್ಟ್ರದ ಎಲ್ಲ ಸಮುದಾಯಗಳು ಅನುಸರಿಸಬೇಕಾದ ಮತ್ತು ಗಮನಿಸಬೇಕಾದ ಮಹತ್ವದ ವಿಷಯ.
ದಾವಣಗೆರೆಯಲ್ಲಿ ಅಕ್ಟೋಬರ್ 23ರಂದು ಮಾದಿಗ ಮತ್ತು ಛಲವಾದಿ ಒಳಮೀಸಲಾತಿ ಹೋರಾಟ ಹಮ್ಮಿಕೊಂಡಿದ್ದು, ಈವರೆಗೂ ವಿಭಿನ್ನ ದಾರಿಗಳಲ್ಲಿ ನಡೆಯುತ್ತಿದ್ದ ಎರಡು ಸಹೋದರ ಸಮಾಜಗಳು ಅಂತಿಮವಾಗಿಯಾದರೂ ಒಂದೇ ವೇದಿಕೆಯಲ್ಲಿ ಹೋರಾಟಕ್ಕೆ ಐಕ್ಯತೆ ರೂಪಿಸುತ್ತಿರುವುದು, ಮರಳುಗಾಡಿನಲ್ಲಿ ನದಿಯೇ ಸಿಕ್ಕಂತಾಗಿದೆ. ಕಾರಣ ಒಳಮೀಸಲಾತಿಯ ಹೋರಾಟಕ್ಕೆ ಸ್ಪಂದಿಸದೆ ಹಿಂದೆ ಸರಿಯುತ್ತಿದೆಯೆಂದು ಅಪವಾದ ಹೊತ್ತಿದ್ದ ಛಲವಾದಿ ಸಮಾಜ ಮುನ್ನುಗ್ಗಿ ಬಂದು ತಾವು ವಿರೋಧಿಗಳಲ್ಲ, ನಾವೂ ಕೂಡ ಒಳಮೀಸಲಾತಿ ಹೋರಾಟದ ಸಹಭಾಗಿಗಳೆಂದು ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲಲು ಜಿಲ್ಲೆಯಲ್ಲಿ ಕೈಜೋಡಿಸಿರುವುದು ಹೋರಾಟಕ್ಕೆ ಅಭೂತಪೂರ್ವ ಯಶಸ್ಸನ್ನು ಕೊಟ್ಟಿದೆ. ಹೋರಾಟದ ವೇಗ ಮತ್ತು ಕಿಚ್ಚನ್ನು ಹೆಚ್ಚಿಸಿದೆ.
ಕಳೆದ 30 ವರ್ಷಗಳಿಂದ ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ಪ್ರಬಲವಾಗಿ ಗುರುತಿಸಿಕೊಂಡಿದ್ದ ಮಾದಿಗ ಸಮಾಜ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅತಿಶೋಷಣೆಗೆ ಒಳಗಾಗಿ ಈಗಲೂ ಸಂವಿಧಾನ ಪೂರ್ವದ ಸ್ಥಿತಿಯಲ್ಲೇ ಇದೆ. ಸಾಮಾಜಿಕವಾಗಿ ತುಳಿದುಕೊಳ್ಳಲಾಗಿರುವ ಸಮಾಜ ಮಾದಿಗಸಮಾಜ. ಹಾಗಾಗಿ ಸಮಾಜದ ಮುಖಂಡರು ಒಳಮೀಸಲಾತಿಗಾಗಿ ದೊಡ್ಡ ಮಟ್ಟದಲ್ಲಿ ದನಿಯೆತ್ತಿದ್ದರು.
ಮಾದಿಗ ಸಮುದಾಯದಷ್ಟೇ ಶೋಷಣೆ, ಅಸ್ಪೃಶ್ಯತೆಗೆ ಒಳಗಾಗಿರುವ ಛಲವಾದಿ ಸಮುದಾಯ ಕೂಡ ಎಲ್ಲಿಯೂ ಒಳಮೀಸಲಾತಿ ವಿರೋಧಿಸದೆ ಸಾರ್ವಜನಿಕವಾಗಿ ಒಳಮೀಸಲಾತಿ ಹೋರಾಟಗಳಲ್ಲಿ ವೈಜ್ಞಾನಿಕ ನ್ಯಾಯಕ್ಕೆ ಒತ್ತಾಯಿಸುತ್ತ, ಅವರ ಹೋರಾಟ ಮತ್ತೊಂದು ದಾರಿಯಲ್ಲಿ ಸಾಗಿತ್ತು.
1974ರಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪನವರ ನೇತೃತ್ವದಲ್ಲಿ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯನ್ನು ಎರಡು ಸಮುದಾಯಗಳು ಒಟ್ಟಾಗಿ ಸಂಘಟಿಸಿ ಹಲವು ವಿಚಾರಧಾರೆಗಳಲ್ಲಿ ಸಂಘಟಿತ ಹೋರಾಟ ನಡೆಸುತ್ತಿದ್ದರು. ಚಂದ್ರಗುತ್ತಿಯ ಹೋರಾಟ, ಕಂಬಾಲಪಲ್ಲಿ ಇತರ ಹೋರಾಟಗಳಲ್ಲಿ ಒಟ್ಟಿಗೆ ಇದ್ದವು. ತದನಂತರ ಬದಲಾದ ಪರಿಸ್ಥಿತಿಯಲ್ಲಿ ದಲಿತ ಸಂಘರ್ಷ ಸಮಿತಿ ಹಲವು ಬಣಗಳಾಗಿ ಒಡೆದ ನಂತರ ಮಾದಿಗ ಸಮುದಾಯದ ದಲಿತ ಸಂಘರ್ಷ ಸಮಿತಿಯ ಬಣಗಳು ಹೋರಾಟ ನಡೆಸಿ ಒಳಮೀಸಲಾತಿಗಾಗಿ ಹೋರಾಟವನ್ನು ಮುನ್ನಡೆಸಿದ್ದವು. ಛಲವಾದಿ ಸಮುದಾಯದ ನಾಯಕರ ಕೆಲವು ಸಂಘಟನೆಗಳೂ ಕೂಡ ಹೋರಾಟ ನಡೆಸಿದ್ದವು. ಆದರೆ ಬೇರೆ ಬೇರೆ ಸ್ಥಳಗಳಲ್ಲಿ ಹೋರಾಟವನ್ನು ಸಂಘಟಿಸಿದ್ದರು.
ಹೀಗೆ ಎರಡು ವಿಭಿನ್ನ ತುದಿಗಳಲ್ಲಿ ವಿಭಿನ್ನ ದಿಕ್ಕುಗಳಲ್ಲಿ ಬೇರೆ ದಾರಿಗಳಲ್ಲಿ ನಡೆಸುತ್ತಿರುವ ಹೋರಾಟ ಇದೀಗ ಅಕ್ಟೋಬರ್ 23ಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಒಗ್ಗೂಡಲಿದೆ. ಎರಡು ಪ್ರವಾಹದ ನದಿಗಳು ಸಂಗಮದಲ್ಲಿ ಸೇರಿ ಒಂದಾಗಿ ಭೋರ್ಗರೆದು ಮುನ್ನುಗ್ಗುವಂತೆ, ಒಳಮೀಸಲಾತಿ ಹೋರಾಟಕ್ಕೆ ವೇಗ ಬರಲಿದ್ದು, ಮಹತ್ವದ ಸಂದೇಶ ನೀಡಲಿವೆ ಎಂದೇ ವಿಶ್ಲೇಷಣೆಯಾಗುತ್ತಿದೆ.
ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕ ಸಂತೋಷ್ ಕೋಡಿಹಳ್ಳಿ ಹೇಳುವ ಪ್ರಕಾರ, “ಎರಡು ಸಮುದಾಯಗಳಿಗೆ ಇದು ಅನಿವಾರ್ಯದ ಪರಿಸ್ಥಿತಿಯಾಗಿದೆ. ಸಾಮಾಜಿಕವಾಗಿ ಎರಡೂ ಜಾತಿಗಳು ಅಸ್ಪೃಶ್ಯರು ಮತ್ತು ತುಳಿದುಕ್ಕೊಳಗಾದವರು. ಒಳಮೀಸಲಾತಿ ಎರಡೂ ಸಮುದಾಯಗಳನ್ನು ಶೈಕ್ಷಣಿಕ, ಔದ್ಯೋಗಿಕವಾಗಿ ಮೇಲೆತ್ತುವ ಸಾಧನವಾಗಿದೆ. ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಸ್ಪರ್ಶ ಜಾತಿಗಳು ಅವಕಾಶಗಳನ್ನು ವಿಫುಲವಾಗಿ ಬಾಚಿಕೊಳ್ಳುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪು ಮತ್ತು ಒಳಮೀಸಲಾತಿಯ ವಿಶ್ಲೇಷಣೆ ಒಂದು ಐತಿಹಾಸಿಕ ಮೈಲುಗಲ್ಲಾಗಿದೆ. ಹಾಗಾಗಿ ಇದರ ಯಶಸ್ವಿ ಅನುಷ್ಠಾನಕ್ಕೆ ಮತ್ತು ತಮಗಾಗಿರುವ ಅನ್ಯಾಯ, ಶೋಷಣೆಗೆ ಸಾಮಾಜಿಕವಾಗಿ ನ್ಯಾಯವನ್ನು ಪಡೆಯಲು ಇಂದು ಒಗ್ಗೂಡಿ ಹೋರಾಟ ಸಂಘಟಿಸಬೇಕಿದೆ.
1944ರ ಕಾನ್ಫರೆನ್ಸ್‌ನಲ್ಲಿ ಮತ್ತು ಆನಂತರದ ಸಂವಿಧಾನ ಸಭೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಹೇಳುವ ಪ್ರಕಾರ ‘ಅಸ್ಪೃಶ್ಯ ಸಮಾಜಗಳು ತಮ್ಮಲ್ಲಿನ ಮೇಲು ಕೀಳುಗಳನ್ನು ತೊರೆದು ಹೊರಬರಬೇಕಿದೆ. ಇಲ್ಲವಾದಲ್ಲಿ ಮೇಲ್ವರ್ಗಗಳ ಶೋಷಣೆ, ಅಸ್ಪೃಶ್ಯತೆಯ ಆಚರಣೆಯನ್ನು ಪ್ರಶ್ನಿಸುವ ಹಕ್ಕು ಅಸ್ಪೃಶ್ಯತೆಗೆ ಒಳಗಾಗಿರುವ ಅಸ್ಪೃಶ್ಯರಿಗೂ ಕೂಡ ಇರುವುದಿಲ್ಲ’ವೆಂದು ಸ್ಪಷ್ಟವಾಗಿ ತಿಳಿಸಿದ್ದರು. ಹಾಗಾಗಿ ಸೋದರ ಸಮಾಜಗಳು ಎನಿಸಿಕೊಳ್ಳುವ ಮಾದಿಗ ಮತ್ತು ಛಲವಾದಿಗಳು ಎಂದಿಗಿಂತಲೂ ಇಂದು ಒಗ್ಗೂಡುವ ಅಗತ್ಯ ಹೆಚ್ಚಾಗಿದೆ. ಇದನ್ನು ಸಾಮಾಜಿಕವಾಗಿ ಮುಂದುವರಿಸಬೇಕಿದೆ. ಮುಂದೆಯೂ ಕೂಡ ಸಮುದಾಯಗಳಲ್ಲಿ ಕೊಡುಕೊಳ್ಳುವಿಕೆಯಲ್ಲಿ ಮುಂದುವರೆಯಲು ಸಾಧ್ಯವೇ ಎಂಬುದರ ಕುರಿತು ಆಲೋಚಿಸಬೇಕಿದೆʼ ಎಂದು ವಿಶ್ಲೇಷಿಸುತ್ತಾರೆ.
ಉತ್ತರ ಭಾರತದಲ್ಲಿ ಚಮ್ಮಾರ, ಪಾಸ್ವಾನ್, ರವದಾಸ್ಯ ಮುಸಾಹಾರ್, ಮಹಾರ್ ಮುಂತಾದ ಪರಿಶಿಷ್ಟ ಜಾತಿಗಳಿದ್ದರೂ ಅಲ್ಲಿ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯಗಳಿಂದಾಗಿ ಒಗ್ಗೂಡಿ ಒಳಮೀಸಲಾತಿಯ ಹೋರಾಟ ಸಾಧ್ಯವಾಗಿಲ್ಲ. ಕೆಲವೆಡೆ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ದಕ್ಷಿಣದಲ್ಲಿ ವಿರೋಧ ವ್ಯಕ್ತವಾಗದಿದ್ದರೂ ಒಗ್ಗೂಡಿರಲಿಲ್ಲ. ಈಗ ರಾಜ್ಯದ ಪರಿಶಿಷ್ಟರಲ್ಲಿ ಶೇಕಡ 75ರಷ್ಟಿರುವ ಎರಡೂ ಸಮುದಾಯಗಳು ಒಗ್ಗೂಡಲು ಅಣಿಯಾಗಿರುವುದೇ ಐತಿಹಾಸಿಕ ವೇದಿಕೆಯಾಗಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಳಮಿಸಲಾತಿಯ ಹೋರಾಟಕ್ಕೆ ನೈತಿಕ ಬಲ, ಐಕ್ಯತೆ ಮತ್ತು ಸಹೋದರತ್ವಕ್ಕೆ ಉತ್ತಮ ಸಂದೇಶ ಮತ್ತು ಮುನ್ನುಡಿ ಬರೆಯಲಿ ಎಂಬುದೇ ಎಲ್ಲರ ಆಶಯವಾಗಿದೆ.
ಒಳಮೀಸಲಾತಿ ಹೋರಾಟವನ್ನು ಎಲ್ಲ ಸಮುದಾಯಗಳೂ ಅಂಬೇಡ್ಕರ್ ಅವರ ಆಶಯದಂತೆ ನೋಡಬೇಕಾಗಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಸಾಮಾಜಿಕವಾಗಿ, ಸಂವಿಧಾನಿಕವಾಗಿ ಸಾಮಾಜಿಕ ನ್ಯಾಯದ ಮಹತ್ವ ತಿಳಿಸಿದೆ. ಡಾ ಅಂಬೇಡ್ಕರ್ ಸಂವಿಧಾನದಲ್ಲಿ ಬಯಸಿದ್ದೂ ಕೂಡ ಇದನ್ನೇ. 78 ವರ್ಷಗಳಾದರೂ ಶತಶತಮಾನಗಳಿಂದ ಸಾಮಾಜಿಕವಾಗಿ ನಿಕೃಷ್ಟ ಜೀವನ ನಡೆಸುತ್ತಿರುವ ಅಸ್ಪೃಶ್ಯ ಜನಗಳಿಗೆ ಈಗ ನ್ಯಾಯ ಒದಗಿಸುವ ಕಾಲ ಬಂದಿದೆ. ಇದಕ್ಕೆ ಅಂಬೇಡ್ಕರರನ್ನು ಸೈದ್ಧಾಂತಿಕವಾಗಿ ಅನುಸರಿಸುವ ಪ್ರೀತಿಸುವ ಎಲ್ಲ ಮನಸ್ಸುಗಳು ಮುಕ್ತವಾಗಿ ಒಳಮೀಸಲಾತಿಯನ್ನು ಸ್ವಾಗತಿಸಿ ಒತ್ತಾಯಿಸಬೇಕಿದೆ.
ದಾವಣಗೆರೆಯ ಮಾದಿಗ ಮತ್ತು ಛಲವಾದಿ ಸಮುದಾಯಗಳ ಒಳಮೀಸಲಾತಿಯ ಒಕ್ಕೂಟದ ಈ ಹೋರಾಟ ವಿಶ್ಲೇಷಕರೇ ಹೇಳುವಂತೆ ‘ರಾಜ್ಯಮಟ್ಟದಲ್ಲಿ ದಾವಣಗೆರೆ ಮಾದರಿ ಎಂದು ಹೆಸರಾಗಲಿದೆ’ ಎನ್ನುತ್ತಾರೆ. ದಾವಣಗೆರೆಯಲ್ಲಿ ಎರಡು ಸಮುದಾಯದ ಮುಖಂಡರ, ಜನಗಳ ಸಾಮಾಜಿಕ ನ್ಯಾಯದ ಬದ್ಧತೆ, ಪ್ರಭುದ್ಧತೆ, ಸಹೋದರತೆ ಬೇರೆ ಜಿಲ್ಲೆಗಳ, ರಾಜ್ಯಗಳ ಮತ್ತು ರಾಷ್ಟ್ರದ ಎಲ್ಲ ಸಮಾಜಗಳಿಗೆ ಮಾದರಿಯಾಗಬೇಕಿದೆ. ಜತೆಗೆ ಅದನ್ನು ಅನುಸರಿಸಿ ರಾಜ್ಯ ಮತ್ತು ರಾಷ್ಟ್ರಾದ್ಯಂತ ಒಂದಾಗಿ ಹೋರಾಟ ಕಟ್ಟಿದರೆ ಒಳಮೀಸಲಾತಿ ವರ್ಗೀಕರಣ ಕಗ್ಗಂಟಾಗಲಾರದು. ಅದು ಸಮಾಜದ ಏಳಿಗೆಗೆ ಸಹವರ್ತಿಯಾಗಲಿದೆ. ಸಮ ಸಮಾಜದ ದಿಕ್ಕಿಗೆ ಮುನ್ನುಡಿ ಆಗಲಿದೆ.
ಪ್ರಸ್ತುತ ಸರ್ಕಾರಗಳು ಕ್ಲಾಸ್ ಒನ್ ಅಧಿಕಾರಿಗಳಿಂದ ಹಿಡಿದು ಡಿ ಗ್ರೂಪ್ ನೌಕರರವರೆಗೆ ಕೆಲಸ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗಳ ಔದ್ಯೋಗಿಕ ಅಂಕಿ ಅಂಶಗಳನ್ನು ಪರಿಶೀಲಿಸಿ ಈ ಅಸ್ಪೃಶ್ಯ ಸಮಾಜಗಳಿಗೆ ಒಳಮೀಸಲಾತಿಯ ಅಗತ್ಯತೆ ಎಷ್ಟಿದೆ ಎಂಬುದನ್ನು ಮನಗಾಣಬಹುದು. ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಇದನ್ನೇ ಅಭಿಪ್ರಾಯಪಟ್ಟಿದೆ. ಹಾಗಾಗಿ ಪರಸ್ಪರ ಬೆನ್ನುತೋರಿಸುತ್ತಿದ್ಧ ಎರಡು ಸೋದರ ಸಮುದಾಯಗಳು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಐಕ್ಯತೆಯಿಂದ ಒಗ್ಗೂಡಿ ದಾವಣಗೆರೆಯಲ್ಲಿ ಒಳಮೀಸಲಾತಿ ಅನುಷ್ಠಾನ ಹೋರಾಟ ಕಟ್ಟುತ್ತಿರುವುದು ಆಶಾಕಿರಣವಾಗಿದೆ. ಇದು ರಾಜ್ಯಕ್ಕೆ, ರಾಷ್ಟ್ರಕ್ಕೆ ಮಾದರಿಯಾಗಲಿ. ಇದೇ ರೀತಿಯ ಹೋರಾಟ ರಾಜ್ಯಮಟ್ಟದಲ್ಲೂ ಮತ್ತು ರಾಷ್ಟ್ರಮಟ್ಟದಲ್ಲೂ ಎಲ್ಲ ಪರಿಶಿಷ್ಟ ಜಾತಿಗಳು ಒಗ್ಗೂಡಿ ಮುನ್ನಡೆಸಲಿ ಎನ್ನುವುದೇ ಎಲ್ಲರ ಆಶಯ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು