ದಾವಣಗೆರೆ ಹೊರವಲಯದ ಕುಕ್ಕವಾಡ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದ ಕಾರು ತಡೆಗೋಡೆಯನ್ನು ಛಿದ್ರಗೊಳಿಸಿರುವ ಘಟನೆ ಸೋಮವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.
ದಾವಣಗೆರೆ ತಾಲೂಕಿನ ಕುಕ್ಕುವಾಡ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವೃತ್ತದ ಬೆಂಚ್ ಮತ್ತು ಗೋಡೆಗೆ ಬಡಿದು ವೃತ್ತದ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್‌ಗೆ ಬಡಿದು ನಂತರ ಮನೆಯ ಗೋಡೆಗೆ ನುಗ್ಗಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮನೆಯ ಗೋಡೆಯೂ ಕುಸಿದು ಬಿದ್ದುಹೋಗಿದ್ದು, ರೂಮಿನಲ್ಲಿ ಮಲಗಿದ್ದ ವೃದ್ಧೆ ಗಾಯಗೊಂಡಿದ್ದು, ಮನೆಯ ಕಾಂಪೌಂಡ್ ಗೋಡೆ ಕೂಡ ಕುಸಿದಿದೆ.

ಕಾರು ತ್ಯಾವಣಿಗೆ ರಸ್ತೆಯ ಕಡೆಯಿಂದ ದಾವಣಗೆರೆ ಕಡೆಗೆ ಸಾಗುತ್ತಿದ್ದು, ಕಾರಿನಲ್ಲಿ ನಾಲ್ವರು ಇದ್ದರು ಎನ್ನಲಾಗಿದೆ. ಸ್ಥಳೀಯರ ಪ್ರಕಾರ ಅಪಘಾತಕ್ಕೆ ಅತಿ ವೇಗವೇ ಕಾರಣ, ಕಾರಿನಲ್ಲಿದ್ದ ನಾಲ್ವರೂ ಕೂಡ ಮದ್ಯಪಾನ ಸೇವಿಸಿದ್ದರು ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.

ಕಾರು ಬಡಿದು ಗೋಡೆ ಕುಸಿದು ಬಿದ್ದಿರುವ ಮನೆ ನಿವೃತ್ತ ಶಿಕ್ಷಕ ದಿವಂಗತ ಸುರೇಂದ್ರಪ್ಪ ಎನ್ನುವವರಿಗೆ ಸೇರಿದ್ದು ಎನ್ನಲಾಗಿದ್ದು, ರೂಮಿನಲ್ಲಿ ಮಲಗಿದ್ದ ಅವರ ಧರ್ಮ ಪತ್ನಿ ಲಲಿತಮ್ಮ ಅವರಿಗೆ ಕೆಲವು ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | 14ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರಾಗಿ ಪ್ರೊ. ಎ ಬಿ ರಾಮಚಂದ್ರಪ್ಪ ಆಯ್ಕೆ
ಕಾರು ಬಡಿದ ತೀವ್ರತೆಗೆ ಅಂಬೇಡ್ಕರ್ ವೃತ್ತದಲ್ಲಿ ಪಾದಾಚಾರಿಗಳು ಕುಳಿತುಕೊಳ್ಳಲು ಹಾಕಿರುವ ಸಿಮೆಂಟ್ ಆಸನ ಮತ್ತು ಕಾಂಪೌಂಡ್‌ನ ಮೂಲೆ ಕೂಡ ನುಜ್ಜುಗುಜ್ಜಾಗಿ ಬಿದ್ದಿದೆ.