ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೆಮಲ್ಲನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಆರು ತಿಂಗಳುಗಳಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯೂ ಗಮನ ಹರಿಸದೆ ಕಣ್ಣುಮುಚ್ಚಿ ಕುಳಿತಿದೆ ಎಂದು ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಜೆ. ಹಿರೇಮಲ್ಲನಹೊಳಿ ಆರೋಪಿಸಿದರು.
ಸುಮಾರು 6 ತಿಂಗಳುಗಳಿಂದ ಸಿಬ್ಬಂದಿಗಳು ಸರಿಯಾಗಿ ಅಡುಗೆ ಮಾಡದೆ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಮನೆಯಿಂದ ಬುತ್ತಿಕಟ್ಟಿಕೊಂಡು ಬಂದು ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ದಿನ.ಕಾಮ್‌ನೊಂದಿಗೆ ಮಹಾಲಿಂಗಪ್ಪ ಜೆ. ಹಿರೇಮಲ್ಲನಹೊಳಿ ಮಾತನಾಡಿ, “ಶಾಲೆಯ ಅಕ್ಷರ ದಾಸೋಹ ಅಡುಗೆ ತಯಾರಕರು ಅಕ್ಕಿ, ಬೇಳೆ, ತರಕಾರಿಗಳನ್ನು ಸರಿಯಾಗಿ ತೊಳೆಯದೆ ಶುಚಿತ್ವ ಕಾಪಾಡದೆ ಅಡುಗೆ ತಯಾರಿ ಮಾಡುತ್ತಿದ್ದಾರೆ. ಅದರಲ್ಲಿ ಹುಳುಗಳು, ತಲೆಕೂದಲು, ಕಸಕಡ್ಡಿ ಕಂಡಿಬಂದಿದ್ದು, ಮಣ್ಣಿನ ವಾಸನೆ ಇರುವ ನೀರಿನಿಂದ ಅಡುಗೆ ಮಾಡುವುದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಊಟ ಮಾಡುತ್ತಿಲ್ಲ” ಎಂದು ತಿಳಿಸಿದರು.
“ಅಡುಗೆಯಲ್ಲಿ ಕೂದಲು ಹುಳಗಳು ಇವೆ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದರೆ ಅಡುಗೆ ತಯಾರಕರು ಶಾಲಾ ಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಾರೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ .ಈ ರೀತಿ ನಡೆಯುವ ಈ ವಿಚಾರವನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೆ ಪ್ರಯೋನವಾಗಿಲ್ಲ” ಎಂದು ಆರೋಪಿಸಿದರು.
ಈ ಬಗ್ಗೆ ಮೂರನೇ ತರಗತಿಯ ಶಾಲೆಯ ಮಗುವಿನ ಹೆಸರು ಹೇಳಲಿಚ್ಚಿಸದ ತಾಯಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಹಿಂದಿನ ಶೈಕ್ಷಣಿಕ ವರ್ಷದ ಕೆಲವು ತಿಂಗಳುಗಳಿಂದಲೂ ಸರಿಯಾಗಿ ಬಿಸಿಯೂಟ ತಯಾರಿ ಮಾಡುತ್ತಿಲ್ಲ. ತಮ್ಮ ಮಗು ವಾರದ ಮಧ್ಯೆ ಕೆಲವು ದಿನಗಳಲ್ಲಿ ಮನೆಯಿಂದ ಊಟ ತೆಗೆದುಕೊಂಡು ಹೋಗಿ ಊಟ ಮಾಡುತ್ತದೆ” ಎಂದು ಖಚಿತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಉದ್ಯೋಗ ಕಾರ್ಡ್ ವಿತರಿಸುವಂತೆ ಕೂಲಿಕಾರ್ಮಿಕರ ಆಗ್ರಹ
“ತಾಲೂಕಿನ ಕೆಲವೊಂದು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯಾವುದೇ ಶುಚಿತ್ವ, ರುಚಿ ರಹಿತವಾಗಿದ್ದು, ಮೊಟ್ಟೆ, ಬಾಳೆಹಣ್ಣು, ಶುದ್ಧ ಕುಡಿಯುವ ನೀರು ಕೂಡ ಇಲ್ಲ. ಮಕ್ಕಳು ಅನಿವಾರ್ಯ ಪರಿಸ್ಥಿತಿಯಲ್ಲಿ ಅದನ್ನೇ ಊಟ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ಕಂಡರೂ ಕಾಣದಂತೆ ಜಾಣ ಮೌನ ವಹಿಸಿದ್ದಾರೆ” ಎಂದು ಆರೋಪಿಸಿದರು.
“ಶಾಸಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಶಾಲೆಯಲ್ಲಿ ನಡೆಯುತ್ತಿರುವುದನ್ನು ಕಂಡು ಇಂತಹ ಅಡಿಗೆ ಸಿಬ್ಬಂದಿಗಳಿಗೆ ಮಧ್ಯಾಹ್ನದ ಬಿಸಿ ಊಟ ನಿರ್ವಾಹಕರಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದು ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದರು.