ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿ, ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿಯ ಅಸ್ತಾಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಹಕ್ಕಿ-ಪಿಕ್ಕಿ ಜನಾಂಗದ ಬಾಲಕನ ಮೇಲೆ ಅದೇ ಜನಾಂಗದ 10 ರಿಂದ 15 ಮಂದಿ ಯುವಕರ ಗುಂಪು ಹಲ್ಲೆ ನಡೆಸಿದೆ. ದೊಣ್ಣೆ, ಡ್ರಿಪ್ ಪೈಪ್‌ನಿಂದ ಹಲ್ಲೆ ಮಾಡಿದ್ದು, ಬಾಲಕ ಚೀರಾಡುತ್ತಿರುವುದು ವಿಡಿಯೋದಲ್ಲಿದೆ.
ಇದು ಕೆಲ ತಿಂಗಳ ಹಿಂದೆ ನಡೆದ ಘಟನೆ ಎನ್ನಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿರುವ ಸಾಧ್ಯತೆ ಎಂದೂ ಹೇಳಲಾಗಿದೆ.
ಎಫ್‌ಐಆರ್ ದಾಖಲು : ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಬಾಲಕನ ತಾತ ನೀಡಿದ ದೂರಿನ ಮೇರೆಗೆ ಸದ್ಯ 9 ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಅನುದಾನ, ಅನುದಾನರಹಿತ ಶಾಲೆಗಳಲ್ಲಿ ಡೊನೇಷನ್ ತಡೆಗೆ ಎಸ್‌ಎಫ್ಐ ಆಗ್ರಹ
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಮಾತನಾಡಿ, “ಬಾಲಕ 17 ವರ್ಷದವನಾಗಿದ್ದು, ಅಶ್ಲೀಲ ವಿಡಿಯೋಗಳನ್ನು ನೋಡುವುದು, ಮಹಿಳೆರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನೆಂದು ತಿಳಿದುಬಂದಿದೆ. ಅವನ ಸಂಬಂಧಿಕರ ಒಂಟಿ ಮಹಿಳೆಯ ಎದು ಹೋಗಿ ಬಟ್ಟೆಬಿಚ್ಚಿ ನಿಲ್ಲುವು, ಅಶ್ಲೀಲ ವಿಡಿಯೋ ಪ್ಲೇ ಮಾಡುವಂತಹ ಘಟನೆಗಳನ್ನು ಕಂಡ ಸಂಬಂಧಿಕರೇ ಸೇರಿಕೊಂಡು ಮರಕ್ಕೆ ಕಟ್ಟಿ ಹೊಡೆದಿದ್ದಾರೆ” ಎಂದು ಪ್ರತಿಕ್ರಯಿಸಿದರು.
“ಈ ಕುರಿತು ನಮಗೆ ಯಾವುದೇ ದೂರು ಬಂದಿರಲಿಲ್ಲ. ಇದರ ವಿಡಿಯೋ ವೈರಲ್ ಆದ ಬಳಿಕ ನಾವು ದೂರು ದಾಖಲಿಸಲೇಬೇಕಾಗುತ್ತದೆ. ಈಗ ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೂ ಏಳು ಮಂದಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಸೆಕ್ಷನ್ 188ರಡಿ ಎಫ್‌ಐಆರ್ ದಾಖಲಾಗಿದೆ” ಎಂದು ತಿಳಿಸಿದರು.