ಮುಂದಿನ ದಿನಗಳಲ್ಲಿ ಶಿಕ್ಷಕ ವೃತ್ತಿ ಆರಂಭಿಸುವ ನೀವು ತಂಬಾಕಿನ ದುಷ್ಪರಿಣಾಗಳ ಬಗ್ಗೆ ಅರಿತು ಈ ಬಗ್ಗೆ ಸಮುದಾಯಕ್ಕೆ ತಲುಪಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ನಿಮ್ಮಿಂದ ಸಾರ್ವಜನಿಕರಲ್ಲಿ ಪ್ರಜ್ಞೆ ಉಂಟಾಗಿ ಸ್ವಾಸ್ಥ್ಯ ಸಮಾಜ ನಿರ್ಮಿಸಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಬಿ ಡಿ ಕುಂಬಾರ ಹೇಳಿದರು.
ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಾವಣಗೆರೆ ವಿಶ್ವ ವಿದ್ಯಾನಿಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ದಾವಣಗೆರೆ ಇವರ ಸಹಯೋಗದೊಂದಿಗೆ ಎಂಬಿಎ ಸಭಾಂಗಣದಲ್ಲಿ ಎಂಪಿಇಡಿ ಶಿಕ್ಷಣಾರ್ಥಿಗಳಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003ರ ಕಾಯ್ದೆಯ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ತಂಬಾಕು ಉತ್ಪನ್ನ ತಯಾರಿಸುವ ಕಂಪನಿಯ ಮಾಲೀಕರು ಆಕಾಶದಲ್ಲಿ ಹಾರಾಡುತ್ತಿದ್ದು, ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವವರು ರೋಗ-ರುಜಿನಗಳಿಂದ ಬಳಲಿ ಆರ್ಥಿಕ ತೊಂದರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಇಂತಹ ದುಶ್ಚಟಗಳಿಂದ ದೂರವಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ” ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಷಣ್ಮುಗಪ್ಪ ಎಸ್ ಮಾತನಾಡಿ, “ಯುವಕರು ಕುತೂಹಲದಿಂದ ದುಶ್ಚಟಗಳಿಗೆ ಬಲಿಯಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದನ್ನು ರಸ್ತೆ ಬದಿಯಲ್ಲಿ ಅಂಟಿಸುವ ಪೋಸ್ಟರ್ಗಳಲ್ಲಿ ನೋಡುತ್ತಿದ್ದೇವೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಿ. ತಂಬಾಕು ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ಗೆ ಸಿಮೀತವಾಗದೆ, ದೇಹದ ಪ್ರತಿ ಒಂದು ಅಂಗಾಂಗಕ್ಕೂ ಕ್ಯಾನ್ಸರ್ ತರಿಸುತ್ತದೆ. ಆದ್ದರಿಂದ ಪ್ರಾರಂಭಿಕ ಹಂತದಿಂದಲೇ ದುಶ್ಚಟಗಳಿಂದ ದೂರವಿರಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕುಣಿಗಲ್ನಲ್ಲಿ ಕಾಂಗ್ರೆಸ್ ಸಮಾವೇಶ; ಬಸ್ಗಳಿಲ್ಲದೆ ಪರಿದಾಡಿದ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು
ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ ರಾಘವನ್ ಜಿ ಡಿ, ಆರ್ಥಿಕಾಧಿಕಾರಿ ದ್ಯಾಮನಗೌಡ ಮುದ್ದನಗೌಡ್ರು, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ದಿವಾಕರ್ ನಾಯ್ಕ, ಕ್ರೀಡಾ ವಿಭಾಗದ ದೈಹಿಕ ಶಿಕ್ಷಣದ ಮುಖ್ಯಸ್ಥ ಡಾ. ಕೆ ವೇಂಕಟೇಶ, ಸಮಾಜಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಬಿ ಎಸ್, ಕ್ರೀಡಾಧಿಕಾರಿ ಡಾ ವೀರಪ್ಪ ಬಿ ಎಚ್, ಸಿ ಜಿ ಆಸ್ಪತ್ರೆ ದಂತ ವಿಭಾಗದ ಮುಖ್ಯಸ್ಥರು ಸಂಪನ್ಮೂಲ ವ್ಯಕ್ತಿ ಡಾ ತಿಪ್ಪೇಸ್ವಾಮಿ ಪಿ ಎಂ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಾಮಾಜಿಕ ಕಾರ್ಯಕರ್ತ ದೇವರಾಜ್ ಕೆ ಪಿ ಇದ್ದರು.
