ಸ್ಮಶಾನಕ್ಕೆ ನುಗ್ಗಿದ ತುಂಗಭದ್ರಾ ಹಿನ್ನೀರು ಇಡೀ ಸ್ಮಶಾನವನ್ನು ಮುಳುಗಿಸಿದ್ದು, ಶವಸಂಸ್ಕಾರಕ್ಕೆ ಜನರು ಪರದಾಟ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ಹೊರವಲಯದ ಗುತ್ತೂರಿನಲ್ಲಿ ನಡೆದಿದೆ.
ಗುತ್ತೂರಿನ ಮಂಜಪ್ಪ(70) ಎಂಬುವವರು ಮೃತಪಟ್ಟಿದ್ದರು. ಶವಸಂಸ್ಕಾರ ನಡೆಸಲು ಹೋದರೆ ಸ್ಮಶಾನ ಜಲಾವೃತವಾಗಿತ್ತು. ನದಿ ಮೈದುಂಬಿ ಹರಿಯುತ್ತಿದ್ದು, ಶವಸಂಸ್ಕಾರ ಹೇಗೆ ಮಾಡುವುದೆಂಬ ಚಿಂತೆ ಸಂಬಂಧಿಕರಿಗೆ ಶುರುವಾಗಿತ್ತು. ಬಳಿಕ ಶವವನ್ನು ಎತ್ತಿಕೊಂಡು ಸೊಂಟ ಮಟ್ಟದ ನೀರಿನಲ್ಲೇ ಸಾಗಿ ಎತ್ತರದ ಪ್ರದೇಶದಲ್ಲಿ ಶವಸಂಸ್ಕಾರ ನೆರೆವೇರಿಸಿದ್ದಾರೆ.
ಅನಿವಾರ್ಯವಾಗಿ ಸಂಬಂಧಿಕರು ನದಿ ತೀರದಲ್ಲೇ ನಿಂತು ಶವಸಂಸ್ಕಾರದ ಪ್ರಕ್ರಿಯೆ ವೀಕ್ಷಿಸಿದ್ದಾರೆ. ಒಂದು ಹಿಡಿಯಷ್ಟು ಮಣ್ಣು ಹಾಕಿ ಮೃತರಿಗೆ ಗೌರವ ಸಲ್ಲಿಸಲು ಸಾದ್ಯವಾಗಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೆಆರ್‌ಎಸ್‌ನಿಂದ 1.30 ಕ್ಯೂಸೆಕ್ ನೀರು ಬಿಡುಗಡೆ
ಗುತ್ತೂರು ಹಾಗೂ ಸುತ್ತಲಿನ ಪ್ರದೇಶದ ನದಿ ತೀರದಲ್ಲಿ ಇಟ್ಟಿಗೆ ಭಟ್ಟಿ ತಯಾರಕರು ಅಕ್ರಮವಾಗಿ ಮಣ್ಣು ಅಗೆಯುವುದು ಮತ್ತು ಮರಳುಗಾರಿಕೆ ನಡೆಸುತ್ತಿರುವುದರಿಂದ ನದಿನೀರು ಸ್ಮಶಾನಕ್ಕೆ ನುಗ್ಗುತ್ತದೆಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ, ಎತ್ತರದ ಪ್ರದೇಶದಲ್ಲಿ ಅಥವಾ ಬೇರೆ ಪ್ರದೇಶದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.