ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಸಾಮಾಜಿಕ ಸೇವೆ, ಸಮಾಜದ ಕಳಕಳಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಸೇವೆಗಳ ಹಿನ್ನೆಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯವು 2025-26ನೇ ಸಾಲಿನ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಿಸಿದ್ದು, ಏಪ್ರಿಲ್ 2ರ ಬುಧವಾರ ನಡೆದ ಘಟಿಕೋತ್ಸವದಲ್ಲಿ ನಿರಂಜನಾನಂದಪುರಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಹೆಚ್ಚು ಮೂಢನಂಬಿಕೆಗಳನ್ನು ಪರಿಪಾಲಿಸುವ ಸಮುದಾಯಗಳನ್ನು ಎಚ್ಚರಿಸಿ ಪ್ರಾಕೃತಗೊಳಿಸಿ ಜತೆಯಾಗಿ ಕರೆದುಕೊಂಡು ಹೋಗುವ ಮತ್ತು ಸಮಾಜಪರ ಚಿಂತನೆ ಮಾಡುವ ಕನಕ ಗುರುಪೀಠದ ನಿರಂಜನಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್ ಘೋಷಿಸಿರುವುದು ಸ್ವಾಗತಾರ್ಹ ಮತ್ತು ಇದು ಅಹಿಂದ ಸಮಾಜಕ್ಕೆ ನೀಡಿರುವ ಗೌರವ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮತ್ತು ಮೂಢನಂಬಿಕೆಗಳನ್ನು ಪರಿಪಾಲಿಸುವ ಸಮುದಾಯಗಳನ್ನು ಜಾಗೃತಗೊಳಿಸಿ ಜೊತೆಜೊತೆಯಾಗಿ ಕರೆದು ಒಟ್ಟಗೂಡಿಸುವ ಶ್ರಮ ಮತ್ತು ಅವರ ನಿರಂತರ ಸಮಾಜಪರ ಚಿಂತನೆಗಳಿಗೆ ದಾವಣಗೆರೆ ವಿಶ್ವವಿದ್ಯಾಲಯವು ಅತ್ಯಂತ ಸೂಕ್ತ ತೀರ್ಮಾನ ತೆಗೆದುಕೊಂಡು ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರುಪೀಠ ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳಿಗೆ ನೀಡುತ್ತಿರುವ ಗೌರವ ಎಲ್ಲ ಅಹಿಂದ ವರ್ಗಕ್ಕೆ ನೀಡಿದ ಗೌರವವಾಗಿದೆ ಎನ್ನುವ ಹರ್ಷ ವ್ಯಕ್ತವಾಗಿದೆ.

ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಆದಿಕೇಶವರಾಯನ ಪರಮ ಭಕ್ತನಾಗಿ ವಿಜಯನಗರ ಅರಸರ ದಂಡನಾಯಕನಾಗಿದ್ದ ತಿಮ್ಮಪ್ಪನಾಯಕ ನಂತರ ಅಧ್ಯಾತ್ಮ ಚಿಂತಕ, ಮಾನವಕುಲದ ಸಮಾನತೆ ಸಾರಿದ, ದಾಸ ಶ್ರೇಷ್ಠ ಕನಕದಾಸರಾಗಿ ಮರುಹುಟ್ಟು ಪಡೆದ ‘ಕನಕದಾಸ’ರ ಕರ್ಮಭೂಮಿಯಾದ ಕಾಗಿನೆಲೆ ಕನಕ ಗುರುಪೀಠದ ಎರಡನೆಯ ಶ್ರೀಗಳಾಗಿ ಸೇವೆ ಸಲ್ಲಿಸುತ್ತಿರುವವರು ನಿರಂಜನಾನಂದಪುರಿ ಶ್ರೀಗಳು.
ಕುಲಗುರು ಪರಂಪರೆಯಿದ್ದರೂ ಅನಕ್ಷರತೆ ಹೊದ್ದುಮಲಗಿದ್ದ ಹಾಗೂ ಅಲೆಮಾರಿ ವೃತ್ತಿಯಿಂದಾಗಿ ಪರಸ್ಪರ ಸಂಪರ್ಕವಿಲ್ಲದೇ, ಸಂಘಟಿತರಾಗದೇ ಬಡತನ, ದೌರ್ಜನ್ಯ ಅನುಭವಿಸುತ್ತಿರುವ ಸಮಾಜಕ್ಕೆ ಒಂದೆಡೆ ಸಂಘಟಿತರಾಗುವ ಅನಿವಾರ್ಯವಿತ್ತು.
ಇತ್ತೀಚೆಕಗೆ ಅಲ್ಪಸ್ವಲ್ಪ ಜಾಗೃತರಾದ ಸಮಾಜದ ಕೆಲವರು ಸಮಾಜಕ್ಕೊಂದು ಗುರುಪೀಠದ ಅವಶ್ಯಕತೆ ಮನಗಂಡು, ಹಿಂದುಳಿದ ಹಾಲುಮತ ಸಮಾಜವನ್ನು ಮೇಲೆತ್ತಲು, ಸಮಾಜದ ಒಗ್ಗೂಡಿಕೆಗಾಗಿ ಅವಿರತ ಶ್ರಮದಿಂದ ನಾಡಿನಾದ್ಯಂತ ಸಂಚರಿಸಿ ಜನಜಾಗೃತಗೊಳಿಸಿದ್ದು, ಸಮಾಜದ ಗುರುಪೀಠ ಸ್ಥಾಪನೆಗೆ ನಾಂದಿಯಾಯಿತು.

ಸಮಾಜಿಕ ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಬಹಳ ಹಿಂದಿರುವುದರಿಂದ ಮಠ ಮತ್ತು ಪೀಠಾಧಿಪತಿಯನ್ನು ನೇಮಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೂ ಸಮಾಜದ ಹಿರಿಯರ, ಅನೇಕ ನಾಯಕರ ಪರಿಶ್ರಮದಿಂದ ಕನಕ ಗುರುಪೀಠವನ್ನು ಕಾಗಿನೆಲೆಯಲ್ಲಿ ಸ್ಥಾಪಿಸಲಾಯಿತು.
ಕಾಗಿನೆಲೆ ಕನಕಗುರು ಪೀಠದ ಪ್ರಥಮ ಶ್ರೀಗಳಾಗಿ “ಶ್ರೀ ಬೀರೇಂದ್ರಕೇಶವ ತಾರಕಾನಂದಪುರಿಶ್ರೀ” ಗಳನ್ನು ಪೀಠಾಧಿಪತಿಯನ್ನಾಗಿಸಲಾಯಿತು. ಆವಾಗಿನಿಂದಲೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಜನಜಾಗೃತಿ ಕೆಲಸಕಾರ್ಯಗಳು ಸಾಗುತ್ತಾ ಬಂದಿವೆ.

ಅವರ ಕಾಲಾಂತರದಲ್ಲಿ ಗುರು ಪೀಠಾಧಿಪತಿಯ ಅನ್ವೇಷಣೆಯಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳನ್ನು ಸಮಾಜ ಗುರುತಿಸಿ ಅವರನ್ನು ಕನಕಗುರುಪೀಠದ ಶ್ರೀಗಳನ್ನಾಗಿ ನೇಮಕಮಾಡಲಾಯಿತು. ಅಂದಿನಿಂದಲೇ ಶ್ರೀ ನಿರಂಜನಾನಂದಪುರಿ ಶ್ರೀಗಳು ಸಮಾಜದ ಒಳಿತಿಗಾಗಿ, ಅಭಿವೃದ್ದಿಗಾಗಿ, ಸುಧಾರಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಲವು ಅಡೆತಡೆಗಳಿಲ್ಲದೆ ಕುಗ್ಗದೆ ಕುರುಬರಲ್ಲದೇ ಇತರೆ ಹಿಂದುಳಿದ ದೀನದಲಿತ ಸಮಾಜಗಳ ಸಾಮಾಜಿಕ ಸುಧಾರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಪ್ರಕಟಿತ ಪುಸ್ತಕಗಳ ಬೆಳಕಿಗೆ ತರುವ ಕೆಲಸವಾಗಬೇಕು: ಶಾಸಕ ಎಚ್ ಆರ್ ಗವಿಯಪ್ಪ
ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿರುವ ಕುರಿತು ಕುರುಬ ಸಮಾಜದ ಮುಖಂಡ ಶ್ರೀನಿವಾಸ್ ನಂದಿಗಾವಿ ಮಾತನಾಡಿ, “ಶ್ರೀಗಳಿಗೆ ಗೌರವ ಡಾಕ್ಟರ್ ನೀಡಿರುವುದು ಇಡೀ ಸಮಾಜಕ್ಕೆ ಖುಷಿ ತಂದಿದೆ. ಶ್ರೀಗಳು ಹಿಂದುಳಿದಿದ್ದ ಕುರುಬ ಸಮುದಾಯವನ್ನು ಮುನ್ನೆಲೆಗೆ ತರುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಇಂದು ಕುರುಬರು ಸಮಾಜದಲ್ಲಿ ಅಲ್ಪಸ್ವಲ್ಪ ಗುರುತಿಸಿಕೊಳ್ಳಲು ಶ್ರೀಗಳ ಶ್ರಮ ದೊಡ್ಡದಿದೆ. ಇಡೀ ದೇಶದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದ, ಸಂಕಷ್ಟ ಸ್ಥಿತಿಯಲ್ಲಿದ್ದ, ಸಾಮಾಜಿಕವಾಗಿ ಹಿಂದುಳಿದಿದ್ದ ಕುರುಬ ಸಮಾಜವನ್ನು ಗುರುತಿಸುವಂತೆ ಮಾಡಿರುವ ಕಾರ್ಯದಲ್ಲಿ ಶ್ರೀಗಳ ಹೋರಾಟ, ಸಾಧನೆ ಗುರುತರವಾದದ್ದು. ಅವರಿಗೆ ನೀಡಿರುವ ಗೌರವ ಡಾಕ್ಟರೇಟ್ ಇಡೀ ಸಮಾಜಕ್ಕೆ ಸಂದ ಗೌರವವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು