ಮುಂಬರುವ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಾಗ ಹೊಸಮುಖಗಳಿಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ. ಯಾರ ವಿರುದ್ಧವೂ ಪಿತೂರಿ ಮಾಡಿಲ್ಲ. ಅದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಹಾಲಿ ಜಿ ಎಂ ಸಿದ್ದೇಶ್ವರರ ಹೆಸರು ಪ್ರಸ್ತಾಪಿಸದೇ ಅಸಮಾಧಾನ ಹೊರಹಾಕಿದ್ದಾರೆ.
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ದಾವಣಗೆರೆಯಲ್ಲಿ ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಹೈಕಮಾಂಡ್ ವರಿಷ್ಠರು ಅಭಿಪ್ರಾಯ ಪರಿಗಣಿಸುತ್ತಾರೆಂಬ ವಿಶ್ವಾಸವಿದೆ” ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
“ಬಿಜೆಪಿ ರಾಜಕೀಯ ಪಕ್ಷ. ನಾವೆಲ್ಲರೂ ಒಮ್ಮತದಿಂದ ತೀರ್ಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಜಿಲ್ಲೆಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಹೇಳಿದ್ದೇವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ, ಆರ್‌ಎಸ್‌ಎಸ್‌ನ ಪ್ರಮುಖರು, ಇಲ್ಲಿಗೆ ಬಂದಿರುವ ವೀಕ್ಷಕರಿಗೆ ನಾಲ್ಕು ಗೋಡೆಗಳ ಮಧ್ಯೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ” ಎಂದು ಹೇಳಿದರು.
“ನಾಲ್ಕು ಜನ ಅಭ್ಯರ್ಥಿಗಳಿದ್ದೇವೆ. ಟಿಕೆಟ್ ನೀಡುವಂತೆ ಕೇಳಿದ್ದೇವೆ. ನಮ್ಮವರೇ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ಮನೆಯಲ್ಲಿ ಸೇರಿದ್ದರಲ್ಲಿ ತಪ್ಪೇನಿದೆ? ನಾವೇನೂ ಕಾಂಗ್ರೆಸ್‌ನವರ ಮನೆಯಲ್ಲಿ ಸೇರಿದ್ದೇವಾ? ರವೀಂದ್ರನಾಥ್ ತುಂಬಾ ಹಿರಿಯರು. ಅವರೊಟ್ಟಿಗೆ ಸೇರಿ ಚರ್ಚೆ ಮಾಡಿದ್ದೇವೆ. ಪಕ್ಷ ಸಂಘಟನೆ, ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಬೇಕು. ನಾವೇನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಬಂಡಾಯ ಸಭೆ ಅಲ್ಲ. ದೇಶದಲ್ಲಿ 400 ಸ್ಥಾನ ಹಾಗೂ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತೇವೆ” ಎಂದರು.
“ಕಾರ್ಯಕರ್ತರು, ಮುಖಂಡರು ನನ್ನನ್ನು ಸ್ಪರ್ಧೆ ಮಾಡಿ ಎನ್ನುತ್ತಿದ್ದಾರೆ. ಕಾರ್ಯಕರ್ತರ ಮನದಾಳದ ಮಾತು ಹೇಳಿದ್ದೇವೆ. ರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇವೆ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ನಾವು ಕೇಳಿದ್ದು ಸತ್ಯ, ಇದನ್ನು ಮುಚ್ಚಿಡಲು ಆಗಲ್ಲ. ದಾವಣಗೆರೆ ಜಿಲ್ಲೆಯ ಪಕ್ಷದ ಸಂಘಟನೆ ದೃಷ್ಟಿಯಿಂದ ಅವಕಾಶ ಸಿಗಬಹುದೆಂಬ ಆಶಾಭಾವನೆ ನಮ್ಮೆಲ್ಲರಿಗೂ ಇದೆ. ನನ್ನ ಭಾವನೆ ಮತ್ತೊಬ್ಬರ ಭಾವನೆ ಅಲ್ಲ. ಕಾರ್ಯಕರ್ತರ ಭಾವನೆಗಳನ್ನೂ ತಿಳಿಸಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಾ.7ರಂದು ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನಾ ಸಮಾರಂಭ; ಸಚಿವ ಈಶ್ವರ್ ಖಂಡ್ರೆ
ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ ಜಿ ರವಿಕುಮಾರ್, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ, ಲೋಕಿಕೆರೆ ನಾಗರಾಜ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.
