ಕರೆಂಟ್ ಕಂಬಕ್ಕೆ ಹತ್ತಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾಳಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಆಂಜನೇಯ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಕೂಲಿ ಕಾರ್ಮಿಕ ಗೋಗುದ್ದು ಗ್ರಾಮದ ದಾದು(29) ಎಂದು ಗುರುತಿಸಲಾಗಿದೆ.
ಬಡಾವಣೆಯಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿಯನ್ನು ಗುತ್ತಿಗೆದಾರ ಕಾಳಪ್ಪ ಎನ್ನುವವರು ಕೈಗೆತ್ತಿಕೊಂಡಿದ್ದರು. ಬೆಳಗ್ಗೆ ಕೆಲಸ ಆರಂಭಿಸುವ ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗಿತ್ತು. ಈ ಬಗ್ಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಪೂರ್ವಾನುಮತಿ ಹಾಗೂ ಲೈನ್ ಮನ್ ಗಮನಕ್ಕೆ ತರಬೇಕಿದ್ದ ಗುತ್ತಿಗೆದಾರ
ಇದ್ಯಾವುದನ್ನು ಅನುಸರಿಸದೆ ಏಕಾಏಕಿ ವಿದ್ಯುತ್ ಕಂಬ ಏರಿಸಿ ಕೆಲಸ ಮಾಡಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಹೊಸ ಬಡಾವಣೆಯಲ್ಲಿ ಹೊಸ ವಿದ್ಯುತ್ ಕಂಬ ಆಳವಡಿಸಿ ತಂತಿ ಎಳೆಯವ ಕೆಲಸ ಮಾಡಲಾಗುತ್ತಿತ್ತು. ಇದನ್ನು ಗಮನಿಸದ ಕೂಲಿಕಾರ ಕೆಲಸ ಮಾಡುವ ವೇಳೆ ಮಧ್ಯಾಹ್ನ ವಿದ್ಯುತ್ ಚಾರ್ಜ್ ಆಗಿದೆ. ತಕ್ಷಣವೇ ವಿದ್ಯುತ್ ಪ್ರಹರಿಸಿದ್ದರಿಂದ ಕಂಬದ ಮೇಲಿಂದ ಚರಂಡಿಗೆ ಬಿದ್ದಿದ್ದಾನೆ. ಇದರಿಂದ ತಲೆ, ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನು ಓದಿದ್ದೀರಾ? ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ!
ಕೂಡಲೇ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಘಟನೆಗೆ ಗುತ್ತಿಗೆದಾರನ ನಿರ್ಲಕ್ಷವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಘಟನೆಯ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.