ದುಷ್ಟ ಶಕ್ತಿಗಳು ನಮ್ಮ ರಾಜ್ಯದ ಮತ್ತು ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ದೇಶದ, ರಾಜ್ಯದ ಪ್ರಗತಿಯೂ ನಾಶವಾಗುತ್ತದೆ. ಇಂಥಾ ವಿಕೃತರಿಂದ ಯುವ ಜನತೆ ದೂರ ಉಳಿದು ತಮ್ಮ ಬದುಕು-ಭವಿಷ್ಯ ಕಾಪಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು.
ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆದು ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಾಜದ ಪ್ರಗತಿಗೆ ಕಾರಣರಾಗಬೇಕು ಎಂದರು.
ನಾವು ದೇಶಕ್ಕೆ ಹೊರೆಯಾಗದೆ, ದೇಶಕ್ಕೆ ಸಂಪತ್ತಾಗಿ ಬೆಳೆಯಬೇಕು ಎನ್ನುವ ಸಂಕಲ್ಪದೊಂದಿಗೆ ಯುವ ಜನತೆ ಸಜ್ಜಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದುಷ್ಟ ಶಕ್ತಿಗಳು ನಮ್ಮ ರಾಜ್ಯದ ಮತ್ತು ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ದೇಶದ, ರಾಜ್ಯದ ಪ್ರಗತಿಯೂ ನಾಶವಾಗುತ್ತದೆ. ಇಂಥಾ ವಿಕೃತರಿಂದ ಯುವ ಜನತೆ ದೂರ ಉಳಿದು ತಮ್ಮ ಬದುಕು-ಭವಿಷ್ಯ ಕಾಪಾಡಿಕೊಳ್ಳಬೇಕು.
— Siddaramaiah (@siddaramaiah) January 5, 2025
ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ… pic.twitter.com/LFdctOVdTB
ಸಂವಿಧಾನದ ಸಾರ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು. ಪ್ರತೀ ಪ್ರಜೆಗೂ ಅರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರೆಯಬೇಕು. ಪ್ರತಿಯೊಬ್ಬರಿಗೂ ಅವರವರ ಧರ್ಮ ನಂಬಿಕೆಯ ಆಚರಣೆಗೆ ಅವಕಾಶ ಇರಬೇಕು ಎನ್ನುವುದೇ ಸಂವಿಧಾನದ ಸಾರ. ಈ ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಆದ್ದರಿಂದ ಈ ಸಂವಿಧಾನವನ್ನು ಕಾಪಾಡುವುದೇ ನಮ್ಮ ಜವಾಬ್ದಾರಿ ಎಂದರು.
ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ, ದೇಶಕ್ಕೆ ನಾವೇನು ಕೊಟ್ಟೆವು ಎನ್ನುವುದೇ ನಮಗೆ ಮುಖ್ಯವಾಗಬೇಕು. ಅನೇಕ ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು, ಪ್ರಗತಿ ಹಾಳು ಮಾಡಲು ಕೆಲವರು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥಾ ವಿಕೃತರಿಂದ ಯುವ ಜನತೆ ದೂರ ಉಳಿದು ಮನುಷತ್ಯ ಬೆಳೆಸಿಕೊಂಡು, ಸಮಾಜಮುಖಿಯಾಗಿ ಬೆಳೆಯಬೇಕು. ಇದರಿಂದ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಸಾಧ್ಯ ಎಂದರು.
ಒಂದು ಲಕ್ಷದ 62 ಸಾವಿರ ಮಂದಿ ಯುವ ಜನತೆಯ ಖಾತೆಗೆ ಯುವನಿಧಿ ಹಣ ವರ್ಗಾವಣೆ ಮಾಡಿ, ಇವರಿಗೆ ಸ್ಕಿಲ್ ತರಬೇತಿಯನ್ನೂ ನೀಡುತ್ತಿದ್ದೇವೆ. ಇದಕ್ಕಾಗಿ 213 ಕೋಟಿ ಹಣ ಕೊಟ್ಟಿದ್ದೇವೆ. ವಿದ್ಯಾವಂತ ನಿರುದ್ಯೋಗಿ ಪದವೀಧರರ ನೆರವಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಸಂಕಲ್ಪದಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುವಜನ ಕ್ರೀಡಾ, ಸೇವಾ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, “ದಾವಣಗೆರೆಯಲ್ಲಿ ವಿವಿಧ ಕ್ರೀಡಾಂಗಣ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಜೆಎಚ್ ಪಟೇಲ್ ನಗರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲು ತಯಾರಿ ನಡೆಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮುಖಾಂತರವಾಗಿ ಯುವ ಜನತೆ ದಾರಿ ತಪ್ಪಿದಂತೆ ರಾಜ್ಯ ಸರ್ಕಾರದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳ ಆಯೋಜನೆ ಮಾಡಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯ ಯುವಜನರಿಗೆ ಯುವನಿಧಿ ಯೋಜನೆ ಮೂಲಕ 8.50ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ಬುದ್ಧ ಬಸವ ಅಂಬೇಡ್ಕರ್ ಅವರ ತತ್ವಗಳು, ವಿವೇಕಾನಂದರ ಆದರ್ಶಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ನೀರಾವರಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಪ್ರಗತಿಗೆ ವಿವಿಧ ಕಾಮಗಾರಿ ರೂಪಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನೆಡೆಸಬೇಕು ಎಂದು ಒತ್ತಾಯಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ದಾವಣಗೆರೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲನ ಬಂಧನ
ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಚ್ ಎಂ ರೇವಣ್ಣ, ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ, ಹರಿಹರ ಶಾಸಕ ಬಿಪಿ ಹರೀಶ್, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ, ಜಗಳೂರು ಶಾಸಕ ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ, ಮಾಜಿ ಸಚಿವ ಆಂಜನೇಯ, ಯುವ ಜನ ಕ್ರೀಡಾ ಇಲಾಖೆ ಕಾರ್ಯದರ್ಶಿ ಚೇತನ್,ತಾಂಡಾ ಅಭಿವೃದ್ಧಿ ನಿಗಮದ ಜಯಾನಾಯ್ಕ, ಜಿಲ್ಲಾಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಯುವ ಜನತೆ, ಸಾರ್ವಜನಿಕರು ಭಾಗವಹಿಸಿದ್ದರು.
