ರಾಜ್ಯದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಹಲವಾರು ನಗರಗಳಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸಲು ಪಾಲಿಕೆಗಳು ಹೆಣಗಾಡುತ್ತಿವೆ. ಈ ನಡುವೆ ಗ್ರಾಮೀಣ ಭಾಗದಲ್ಲಿಯೂ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದಾವಣಗೆರೆ ಜಿಲ್ಲೆಯ ಗ್ರಾಮವೊಂದರಲ್ಲಿ ನಾಳಿಗಳ ದಾಳಿಯಿಂದ 15 ಕುರಿಗಳು ಸಾವನ್ನಪ್ಪಿವೆ.
ಜಿಲ್ಲೆಯ ಕಂಸಾಗರ ಗ್ರಾಮದಲ್ಲಿ ಕುರಿ ಹಿಂಡಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. 15 ಕುರಿಗಳ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಗಾಯಗೊಂಡಿರುವ ಕುರಿಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಕುರಿಗಳನ್ನು ಕಳೆದುಕೊಂಡಿರುವ ರೈತ ತಿಮ್ಮಣ್ಣ ಕಂಗಾಲಾಗಿದ್ದಾರೆ. ಅವರು ನೂರಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದು, ಕುರಿ ಸಾಕಾಣಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಈಗ, ಬೀದಿ ನಾಯಿಗಳ ದಾಳಿಯಿಂದ ಕುರಿಗಳನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದಾರೆ. ಅಲ್ಲದೆ, ಉಳಿದ ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಬಹುದೆಂಬ ಆತಂಕದಲ್ಲಿದ್ದಾರೆ. ಅವರಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.