ವಿಪರೀತ ಸುಡುವ ಬಿಸಿಲಿನ ಹಿನ್ನಲೆಯಲ್ಲಿ ಸುಮಾರು 13 ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡ ಪರಿಣಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ವರ್ಗದರು ಕೂಡಲೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡುವ ಮೂಲಕ ಜಾಗೃತಿ ಮೂಡಿಸಿದರು.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಕ್ಯಾಂಪ್ ಶ್ರೀಮಾರುತಿ ನಗರದ ಬಡಾವಣೆಯಲ್ಲಿ ಮಂಗಳವಾರದಿಂದ ಸುಮಾರು 13 ಮಂದಿಗೆ ವಾಂತಿ, ಬೇಧಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸುಜಿತ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಕೂಡಲೇ ಸ್ಥಳಕ್ಕೆ ಆಗಮಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿ ಸ್ವಚ್ಚತೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು ಕಳೆದ ವರ್ಷಕ್ಕಿತ ಈ ವರ್ಷ ಬಿಸಿಲು ವಿಪರೀತ ಹೆಚ್ಚಾಗಿದ್ದರಿಂದ ಡೆಂಗ್ಯೂ, ಜ್ವರ, ವಾಂತಿ ಬೇಧಿ ಚಿಕೂನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡಲಿದ್ದು ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಬಿಸಿಲಿನಲ್ಲಿ ಓಡಾಡದಂತೆ ನಿಘಾ ವಹಿಸಬೇಕು ಎಂದರು.
ಬಾಣಂತಿಯರು, ವೃದ್ಧರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಜಾಗ್ರತೆಯಿಂದ ಇರಬೇಕು ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ತಮ್ಮ ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟು ಕೊಳ್ಳಬೇಕೆಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ತಿರುಮಲೇಶ್ ಮಾತನಾಡಿ, ಗ್ರಾಮದಲ್ಲಿ ಬಿಸಿಲಿನ ಝಳಕ್ಕೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಬೀದಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸದಂತೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ಚರಂಡಿಗಳಿಗೆ ಬೀಚಿಂಗ್ ಪೌಡರ್ ಸಿಂಪಡಿಸಲಾಗಿದ್ದು ಜನರು ಶುದ್ಧಕುಡಿಯುವ ನೀರನ್ನು ಬಳಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಹೆಚ್ಚು ಬಿಸಿಲಿನಿಂದಾಗಿ ಜ್ವರ ಮತ್ತು ವಾಂತಿ ಬೇಧಿಯಂತಹ ಪ್ರಕರಣಗಳು ಹೆಚ್ಚಾಗಲಿದ್ದು ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಂಡರೆ ಇಡೀ ಗ್ರಾಮವೇ ಶುಚಿಯಾಗಿರಲು ಸಾದ್ಯವಾಗಲಿದೆ. ಗ್ರಾಮದ ಕ್ಯಾಂಪ್ ಬಡಾವಣೆಯಲ್ಲಿ ಇದ್ದಕ್ಕಿದ್ದಂತೆ 13ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿ ಕಂಡು ಬಂದ ಕೂಡಲೇ ಇಲ್ಲಿನ ವೈದ್ಯರು ಕೂಡಲೇ ಧಾವಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಎಲ್ಲರನ್ನು ಗುಣ ಮುಖರನ್ನಾಗಿ ಮಾಡಿದ್ದಾರೆ, ಅವರ ಕರ್ತವ್ಯ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು.
ತಾಲೂಕು ವೈದ್ಯಾಧಿಕಾರಿ ವಿಶ್ವನಾಥ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯ ಬಿ.ಚಂದ್ರಪ್ಪ, ಆಸ್ಪತ್ರೆಯ ಮೇಲ್ವಿಚಾರಕಿ ಸುಶೀಲಮ್ಮ, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ಸೌಭಾಗ್ಯಮ್ಮ, ಸುಚಿತ್ರಮ್ಮ, ಕಾರ್ಯಕರ್ತೆ ಅಂಬಿಕಾ, ಶಶಿಕಲ, ಗೀತಮ್ಮ, ಮಂಜಮ್ಮ ಸೇರಿದಂತೆ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.
