ದಾವಣಗೆರೆ ನಗರದ ಹೊರವಲಯದ ಆವರಗೊಳ್ಳ ಗ್ರಾಮಕ್ಕೆ ಹೊಂದಿಕೊಂಡಂತಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಹೊಗೆ ಇಡೀ ಊರನ್ನೇ ಸುತ್ತುವರೆದಿದೆ. ಅದು ಕೇವಲ ಹೊಗೆಯೋ ಅಥವಾ ವಿಷಕಾರಿ ಹೊಗೆಯೋ ಎನ್ನುವುದು ಜನರಲ್ಲಿ ಆತಂಕ ಮೂಡಿಸಿದ್ದು, ಕೆಟ್ಟ ಗಾಳಿಯಿಂದ ಜನ ಉಸಿರಾಡಲೂ ಕಷ್ಟಪಡುವಂತಾಗಿದೆ.
ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಘಟಕದ ಸಂಭವನೀಯ ಅವಘಡಗಳ ಕುರಿತು ವರ್ಷದ ಹಿಂದೆಯೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ವಿಲೇವಾರಿ ಘಟಕದ ಸ್ಥಳಾಂತರಕ್ಕೆ ಮನವಿಯನ್ನೂ ಸಲ್ಲಿಸಿಲಾಗಿತ್ತು. ನಗರಾಡಳಿತ ಸುರಕ್ಷಿತ ಕಾರ್ಯಾಚರಣೆಯ ಭರವಸೆ ನೀಡಿತ್ತು. ಆದರೆ ಈವರೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಕೆಲವು ದಿನಗಳ ಹಿಂದಷ್ಟೇ ಇದೇ ರೀತಿಯಾಗಿ ಬಿದ್ದಿದ್ದ ಬೆಂಕಿ ನಂದಿಸಲು ತಿಂಗಳುಗಳ ಕಾಲ ಹಿಡಿಯಿತು. ಇದರಿಂದಾಗಿ ಗ್ರಾಮಸ್ಥರು ತೀವ್ರ ಸಮಸ್ಯೆ ಅನುಭವಿಸಿದ್ದರು. ಈಗ ಮತ್ತೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ.
“ದಿನಂಪ್ರತಿ ನಗರದಿಂದ ತಂದು ಸುರಿಯುವ ಟನ್ ಗಟ್ಟಲೆ ಕಸದ ರಾಶಿ ಗುಡ್ಡದ ರೀತಿಯಲ್ಲಿ ಬಿದ್ದಿದೆ. ಇದರಿಂದಾಗಿ ಸುತ್ತಮುತ್ತಲ ಜನರ ಆರೋಗ್ಯಕ್ಕೂ ಅಪಾಯ. ಈ ವಿಚಾರವನ್ನು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ದಾವಣಗೆರೆ | ಆಸ್ತಿಯಲ್ಲಿ ಪಾಲು ಕೊಡಲಿಲ್ಲವೆಂದು ವ್ಯಕ್ತಿಯ ಕೊಲೆ; ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಬಂಧನ
ಮಾಹಿತಿ ತಿಳಿದು ಆವರಗೊಳ್ಳ ಬಳಿಯ ಘನತ್ಯಾಜ್ಯ ಘಟಕಕ್ಕೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
