ಕೇಂದ್ರ ಸರ್ಕಾರದ ಹಿಟ್ಲರ್ ಆಡಳಿತವನ್ನು ಖಂಡಿಸಿ ದಾವಣಗೆರೆಯಲ್ಲಿ ಇದೇ 24ರಂದು ಇಂಡಿಯಾ ಒಕ್ಕೂಟದ ಪಕ್ಷಗಳು ಬೃಹತ್ ಸಭೆ ನಡೆಸಲು ತೀರ್ಮಾನಿಸಿವೆ ಎಂದು ಕಾಂಗ್ರೆಸ್ ಮುಖಂಡರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಣೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹಿಟ್ಲರ್ ಆಡಳಿತ ಮತ್ತು ಬೆದರಿಕೆಯಿಂದಾಗಿ ಕೋಟ್ಯಾಂತರ ಜನರು ತೊಂದರೆ ಅನುಭವಿಸುತ್ತಿದ್ದು, ಇಂತಹ ದುರಾಡಳಿತವನ್ನು ಕಿತ್ತೊಗೆಯಲು ಸಮಾಜದಲ್ಲಿ, ಅದರಲ್ಲೂ ಯುವ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಈ ಸಭೆ ನಡೆಸಬೇಕಾಗಿದೆ ಎಂದು ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಮಹಾರಾಷ್ಟ್ರದ ಅಜಿತ್ ಪವಾರ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರನ್ನು ಇಡಿ, ಐಟಿ ಮೂಲಕ ಪ್ರಕರಣ ದಾಖಲಿಸಿ ಬೆದರಿಸಿ, ತಮ್ಮ ಪಕ್ಷ ಸೇರಿಕೊಂಡು ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದೆ. ಆದರೆ, ಅವರದೇ ಪಕ್ಷದ ಜಿ.ಎಂ. ಸಿದ್ದೇಶ್ವರ್ ಮಾಡಿದ ಅದಿರು ಪ್ರಕರಣ ಮತ್ತು ಹವಾಲಾ ಪ್ರಕರಣಗಳನ್ನು ಮುಚ್ಚಿಹಾಕಿದೆ ಎಂದು ದೂರಿದರು.
ಕಮ್ಯೂನಿಸ್ಟ್ ಪಕ್ಷದ ಮುಖಂಡರುಗಳಾದ ಆನಂದರಾಜ್, ಉಮೇಶ್, ಆವರಗೆರೆ ಚಂದ್ರು, ಅವರಗೆರೆ ವಾಸು, ಹರಪನಹಳ್ಳಿ ಹಾಲೇಶ್, ನಾಗರಾಜಪ್ಪ, ರೈತ ಸಂಘದ ಪರಶುರಾಮ್, ಆಮ್ ಆದ್ಮಿ ಪಕ್ಷದ ಶಿವಕುಮಾರ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಎಚ್.ಬಿ. ಮಂಜಪ್ಪ, ಆನಂದಪ್ಪ, ವಕೀಲರಾದ ಅನೀಶ್ ಪಾಷಾ, ಡಿಎಸ್ಎಸ್ ಮುಖಂಡರುಗಳು ಮಾತನಾಡಿ ಕೇಂದ್ರ ಸರ್ಕಾರದ ದುರಾಡಳಿತವನ್ನು ಉದಾಹರಣೆ ಸಮೇತ ವಿವರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಸೈಯದ್ ಪರಮೇಶ್ ಸೈಪುಲ್ಲಾ, ಅವರಗೆರೆ, ಅನಿತಾಬಾಯಿ ಮಾಲತೇಶ್, ಸಾಗರ್, ಮಂಗಳ, ಮಂಜಮ್ಮ, ಅಲಿ ರೆಹಮಾನ್, ಖಾಲಿದ್ ಅಹ್ಮದ್, ಜಮ್ಗಳ್ಳಿ ನಾಗರಾಜ್, ಡೋಲಿ ಚಂದು ಸೇರಿದಂತೆ ಡಿಎಸ್ಎಸ್, ಕಮ್ಯೂನಿಸ್ಟ್ ಪಕ್ಷ, ರೈತ ಸಂಘ, ಆಮ್ ಆದ್ಮಿ ಪಕ್ಷಗಳ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.