ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ದಾವಣಗೆರೆ ನಗರದಲ್ಲಿ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಗರ ಪಾಲಿಕೆ ಎದುರಿನ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಸಾಗಿ ಮನವಿ ಸಲ್ಲಿಸಿದ್ದಾರೆ.
ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಡಿ.ಗುಬ್ಬಿ ಮಾತನಾಡಿ, ಕಳೆದ 2023ರ ಮಾರ್ಚನಲ್ಲಿ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ನೇಕಾರರ ಅಭಿವೃದ್ಧಿ ನಿಗಮ ಇನ್ನು ಕಾರ್ಯಾರಂಭ ಮಾಡಿಲ್ಲ. ಶೀಘ್ರವೇ ನೇಕಾರ ಅಭಿವೃದ್ಧಿ ನಿಗಮ ಕಾರ್ಯಾರಂಭ ಮಾಡಬೇಕು. ನೇಕಾರರ ಅಭಿವೃದ್ಧಿಗೆ 100 ಕೋಟಿ ರೂ. ಗಳನ್ನು ಮೀಸಲಿರಿಸಬೇಕು. ದಾವಣಗೆರೆಯಲ್ಲಿ ಜವಳಿ ಪಾರ್ಕ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆಯಿರುವ ನೇಕಾರರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಪರಿಹಾರ ಧನ ಶೀಘ್ರವೇ ನೀಡಬೇಕು. ಕರ್ನಾಟಕ ಹ್ಯಾಂಡ್‌ಲೂಮ್ ಡೆವಲ್ಪಮೆಂಟ್ ಕಾರ್ಪೊರೇಷನ್ ಮುಖಾಂತರ ರಾಜ್ಯದ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ಕೈಮಗ್ಗ ನೇಕಾರ ನೇಯ್ದ ಎರಡು ಜೊತೆ ಬಟ್ಟೆ ಖರೀದಿಸುವಂತೆ ಆದೇಶಿಸಬೇಕು. ವಿದ್ಯಾರ್ಥಿಗಳಿಗೆ ಸ್ಕೂಲ್ ಯೂನಿಫಾರಂ ಬಟ್ಟೆಗಳನ್ನು ನೇಕಾರರಿಂದಲೇ ಖರೀದಿ ಮಾಡಬೇಕು ಹಾಗಿದ್ದಲ್ಲಿ ಮಾತ್ರ ಆಧುನಿಕ ಯುಗದಲ್ಲಿ ನೇಕಾರರು ಆರ್ಥಿಕವಾಗಿ ಸದೃಢರಾಗಲು ಸಾದ್ಯ ಎಂದು ಮನವಿ ಮಾಡಿದರು.
ಪವರ್ ಲೂಮ್ ಡೆವಲಪ್ ಮೆಂಟ್ ಕಾರ್ಪೊರೇಷನ್, ಹ್ಯಾಂಡೂ ಲೂಮ್ ಡೆವಲಪ್ ಮೆಂಟ್ ಕಾರ್ಪೊರೇಷನ್, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮಕ್ಕೆ ಮೂಲ ನೇಕಾರರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು. ನೇಕಾರ ಸಮ್ಮಾನ್ ಯೋಜನೆಯಿಂದ ಹೊರಗುಳಿದ ನೇಕಾರರ ಗಣತಿಯನ್ನು ಶೀಘ್ರವೇ ಪೂರ್ಣಗೊಳಿಸಿ ಅವರಿಗೆ ನೇಕಾರ ಸಮ್ಮಾನ್ ಯೋಜನೆ ತಲುಪುವಂತೆ ಆಗಬೇಕು. ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ನೇಕಾರರ ವಿದ್ಯುತ್ ಬಿಲ್ ಬಾಕಿಯನ್ನು ಸರ್ಕಾರವೇ ಭರಿಸಬೇಕು. ಸರ್ಕಾರ 10 ಹೆಚ್ಚಿಯವರೆಗೂ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದು, 10ರಿಂದ 20 ಹೆಚ್ ಪಿವರೆಗಿನ ವಿದ್ಯುತ್ ದರವನ್ನು 1.25 ರೂ.ವರೆಗೆ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಅಲ್ಲದೇ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇಕಾರರಿಗೂ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿವಕುಮಾರ್ ಪಿ.ಸುಂಕಾಪುರ, ಕೆ.ಎನ್. ವೆಂಕಟೇಶ್, ಸೋಮಶೇಖರ್ ಯಡಳ್ಳಿ, ಕರಿಬಸಪ್ಪ ಐರಣಿ, ಪರಶುರಾಮ ನಂದಿಗಾವಿ, ರಾಮಪ್ಪ, ಪರಶುರಾಮ, ಮಂಜುನಾಥ್, ರವೀಂದ್ರ, ಚಂದ್ರು, ತಿಪ್ಪೇಸ್ವಾಮಿ, ಪ್ರಮೋದ್, ವಿಠಲ ಇತರರು ಹಾಜರಿದ್ದರು.