ಖೋಟಾನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಸರ್ವಿಸ್ ರಸ್ತೆಯಲ್ಲಿ ಇಬ್ಬರು ಖೋಟಾನೋಟು ಚಲಾವಣೆಗೆ ಪ್ರಯತ್ನಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಆರೋಪಿ ತಳವಾರ ಕುಬೇರಪ್ಪ, ಹರೀಶ ಬಿ ಹರೀಶಗೌಡ ಎಂಬವರನ್ನು ಬಂಧಿಸಲಾಗಿದೆ. ಅವರಿಂದ 500 ರೂ, ಮುಖಬೆಲೆಯ 37,000 ರೂ. ಮೌಲ್ಯದ ಖೋಟಾನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ದಾವಣಗೆರೆ ಬಾಡಾ ಕ್ರಾಸ್ ಬಳಿ ಜೆ. ರುದೇಶ, ಮನೋಜ್ ಗೌಡ, ಸಂದೀಪ, ಕೃಷ್ಣನಾಯ್ಕ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು, 500 ರೂ. ಮುಖಬೆಲೆಯ ಒಟ್ಟು 9,000 ರೂ. ಮೌಲ್ಯದ ಖೋಟಾನೋಟುಗಳನ್ನು ವಶಕ್ಕೆ ಪಡೆಯಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಕಾರನ್ನೂ ಸೀಜ್ ಮಾಡಲಗಿದೆ ಎಂದು ಹೇಳಿದ್ದಾರೆ.
3 ಮತ್ತು 4 ನೇ ಆರೋಪಿತರ ಮಾಹಿತಿ ಮೇರೆಗೆ ಮೈಸೂರು ಜಿಲ್ಲೆ ಕೂರಗಳ್ಳಿ ಮೇಗಲಕೊಪ್ಪಲಿನಲ್ಲಿರುವ 3ನೇ ಆರೋಪಿಯ ಬಾಡಿಗೆ ಮನೆಯಲ್ಲಿ 7,07,700 ರೂ. ಮೌಲ್ಯದ ಖೋಟಾನೋಟುಗಳು, 43,000 ರೂ. ಮೌಲ್ಯದ ಅಸಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಒಟ್ಟು 3,00,000 ರೂ. ಮೌಲ್ಯದ ಲ್ಯಾಪ್ ಟಾಪ್ ಗಳು, ಕಲರ್ ಪ್ರಿಂಟರ್‌ಗಳು, ಪೇಪರ್ ಇತರೇ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಬೇಧಿಸಿದ ಹರಿಹರ ಸಿ.ಪಿ.ಐ ಸುರೇಶ ಸಗರಿ, ಪಿ.ಎಸ್.ಐ ಬಿ.ಎಸ್ ಅರವಿಂದ್, ಅಬ್ದುಲ್ ಖಾದರ್ ಜಿಲಾನಿ, ದಾವಣಗೆರೆ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿಯವರಾದ ಮಜೀದ್, ಅಂಜಿನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್. ಹರಿಹರ ವೃತ್ತ ಕಛೇರಿಯ ಮಹ್ಮದ್ ಇಲಿಯಾಜ್, ನಾಗರಾಜ, ಮುರುಳಿಧರ, ಹರಿಹರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ರಮೇಶ್, ನೀಲಮೂರ್ತಿ, ಬಣಕಾರ ಶ್ರೀಧರ, ಗಂಗಾಧರ, ಸಿದ್ದಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಜಾಧವ್, ರಾಘವೇಂದ್ರ, ಶಾಂತ್ ಕುಮಾರ್ ರವರಿಗೆ ಬಹುಮಾನ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ವಿಜಯಕುಮಾರ.ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿಗಳಾದ ಬಿ.ಎಸ್ ಬಸವರಾಜ ಇತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.