ಭದ್ರಾ ಜಲಾಶಯದಿಂದ ಮೂರನೇ ಬಾರಿಗೆ ಸರದಿಯಲ್ಲಿ ನೀರು ಹರಿಸಿದರೂ ಅನೇಕ ಕಡೆ ತಲುಪದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನಾದರೂ ಸಮರ್ಪಕ ನೀರೊದಗಿಸುವಂತೆ ರೈತ ಮುಖಂಡ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ರೈತರ ನಿಯೋಗವು ಜಿಲ್ಲಾ ಆಡಳಿತಕ್ಕೆ ಒತ್ತಾಯಿಸಿದೆ.
ದಾವಣಗೆರೆ ನಗರದಲ್ಲಿ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶರನ್ನು ಭೇಟಿ ಮಾಡಿದ ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ತೇಜಸ್ವಿ ಪಟೇಲ್ ನೇತೃತ್ವದ ರೈತ ನಿಯೋಗವು, ದಾವಣಗೆರೆ ತಾ. ಜಡಗನಹಳ್ಳಿ ಗ್ರಾಮದ 21 ವರ್ಷದ ಯುವ ರೈತ ಗುರುರಾಜ ಭದ್ರಾ ನಾಲೆಗೆ ನೀರು ಬರದೇ, ತಮ್ಮ ತೋಟ ಒಣಗಿರುವುದನ್ನು ನೋಡಿ ನೋವಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿಷಾದಿಸಿದರು.
ಜಡಗನಹಳ್ಳಿ ಗ್ರಾಮದ ಯುವ ರೈತ ಗುರುರಾಜಗೆ ವಿವಾಹ ನಿಶ್ಚಿಯವಾಗಿತ್ತು. ಆದರೆ, ಭದ್ರಾ ಜಲಾಶಯದಿಂದ ನಾಲೆಗೆ ಮೂರನೇ ಸಲ ನೀರು ಬಿಟ್ಟರೂ ಸಹ ತಮ್ಮ ಭಾಗಕ್ಕೆ ನೀರು ಬರದೇ, ತಮ್ಮ ತಂದೆ ಮಹೇಶ್ವರಪ್ಪ ಕಷ್ಟಪಟ್ಟು ಬೆಳೆಸಿದ್ದ ತೋಟವು ಸಂಪೂರ್ಣ ಒಣಗಿದ್ದರಿಂದ ತೀವ್ರವಾಗಿ ನೊಂದಿದ್ದ ಗುರುರಾಜ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಭದ್ರಾ ನಾಲೆಗಳ ನೀರು ಹರಿಸುವ ವೇಳಾಪಟ್ಟಿಯನ್ನು ಇನ್ನೂ ಕನಿಷ್ಠ 3-4 ದಿನಗಳ ಕಾಲ ವಿಸ್ತರಿಸಬೇಕು ಎಂದರು.
ತೋಟ ಒಣಗಿದ್ದರಿಂದ ನೊಂದು ಸಾವಿಗೆ ಶರಣಾದ ಗುರುರಾಜನ ಸಾವೇ ಕೊನೆಯಾಗಲಿ. ಮತ್ತೆ ಯಾವೊಬ್ಬ ರೈತರು ಸಹ ನೀರು ಬಂದಿಲ್ಲವೆಂದು ಕೊರಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. ಈ ಎಲ್ಲಾ ಸಮಸ್ಯೆ ಅರಿತು, ತಕ್ಷಣವೇ ಇನ್ನೂ 4 ದಿನಗಳ ಕಾಲ ನೀರು ಹರಿಸುವಿಕೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ತೇಜಸ್ವಿ ಪಟೇಲ್ ಆಗ್ರಹಿಸಿದರು.
ಕಾರಿಗನೂರು, ತ್ಯಾವಣಿಗೆ, ಜಡಗನಹಳ್ಳಿ, ಮುಕ್ತನಹಳ್ಳಿ, ಸಂಕ್ಷೀಪುರ, ನಾಗರಸನಹಳ್ಳಿ, ಬಲ್ಲೂರು, ಶಿರಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಎಂ.ಬಿ. ಗುತ್ಯಪ್ಪ, ಗ್ರಾಮಗಳ ಬಸವರಾಜ, ಜಿ.ಪಿ.ಜಗದೀಶಪ್ಪ, ಆರ್. ಎಂ.ಹರೀಶ, ಟಿ.ಬಸಪ್ಪ, ಎ.ಎಚ್. ಚನ್ನಬಸಪ್ಪ, ಎಂ.ಟಿ. ಚಿಕ್ಕಪ್ಪ, ಎಂ.ಬಿ. ನಿಂಗಪ್ಪ, ರೇವಣಸಿದ್ದಪ್ಪ, ಕರಿಬಸಪ್ಪ, ಸುಭಾನ್ ಸಾಬ್, ಮಹಾಂತೇಶ, ಎಂ.ಜೆ. ರೇವಣಸಿದ್ದಪ್ಪ, ಎಂ.ಬಿ. ನಾಗರಾಜಪ್ಪ, ಎಂ.ಪಿ.ಸಿದ್ದಲಿಂಗಪ್ಪ, ಎಂ.ಟಿ. ಗುಡ್ಡಪ್ಪ, ಕುಮಾರಪ್ಪ, ಎಂ.ಪಿ. ಬಸವರಾಜ, ಎನ್. ಹನುಮಂತಪ್ಪ, ಎಂ.ಎಚ್. ನೀಲಗಿರಿಯಪ್ಪ, ಎಂ.ಎಸ್. ಗುದ್ದೇಶ, ಎಂ.ಎನ್. ಮಂಜು ಇತರ ರೈತರು ಹಾಜರಿದ್ದರು.
