ಕೇವಲ ಧರ್ಮ, ಜಾತಿಯಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಸರ್ಕಾರವು ದೇಶದ ರೈತರು, ಕಾರ್ಮಿಕರು, ಯುವಕರು, ದಲಿತ, ಹಿಂದುಳಿದವರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂದು ತುಮಕೂರಿನ ರೈತ ಮುಖಂಡ ಎನ್.ಜಿ. ರಾಮಚಂದ್ರ ಆರೋಪಿಸಿದರು.
ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ದೇಶದ ಬಡವರ ಹಾಗೂ ರೈತರ, ಹಿಂದುಳಿದವರ ಅಭಿವೃದ್ಧಿ ಬಗ್ಗೆ ಕೆಲಸ ಮಾಡದೆ ,ಕೇವಲ ಧರ್ಮ ಇತರೆ ಭಾವನಾತ್ಮಕ ವಿಷಯಗಳಲ್ಲಿ ಅವರನ್ನೆಲ್ಲಾ ಹಿಡಿದಿಟ್ಟುಕೊಂಡಿದೆ. ಈ ಷಡ್ಯಂತ್ರಿಗಳ ಬಗ್ಗೆ ಜನರಲ್ಲಿ ಜಗೃತಿ ಮೂಡಿಸಲು ಪ್ರಗತಿಪರರು, ಚಿಂತಕರು ಸೇರಿ ಕೊಂಡು ಎದ್ದೇಳು ಕರ್ನಾಟಕ ಅಭಿಯಾನವನ್ನು ಆರಂಭಿಸಿದ್ದೇವೆ ಎಂದರು.
ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ಜನ ಸಾಮಾನ್ಯರ ಬದುಕನ್ನು ರೂಪಿಸಲು ಹೇಳಿಕೊಳ್ಳುವಂತ ಹೊಸ ಅಭಿವೃದ್ಧಿ ಯೋಜನೆಯನ್ನೂ ನೀಡಿಲ್ಲ, ಜನ ಸಾಮಾನ್ಯರಿಗೆ ಯಾವ ಸಬ್ಸಿಡಿಯನ್ನೂ ಹೆಚ್ಚಿಸದೆ, ಎಲ್ಲವನ್ನೂ ಕಡಿತಗೊಳಿಸಲಾಗಿದೆ. ಈ ಸಬ್ಸಿಸಿ ಕಡಿತದ ಮೊತ್ತ ಎಲ್ಲಿ ಬಳಕೆ ಮಾಡಲಾಗಿದೆ ಎಂದು ಕೇಳಿದರೆ ಕೋವಿಡ್ ನಿಭಾವಣೆಯ ಸಬೂಬನ್ನು ಸಂಘ ಪರಿವಾರದವರು ನೀಡುತ್ತಾರೆ. ಆದರೆ, ಕೋವಿಡ್ ವ್ಯಾಕ್ಸಿನ್ ಯೋಜನೆಗೆ ಬಳಕೆಯಾಗಿದ್ದು ಕೇವಲ 37 ಸಾವಿರ ಕೋಟಿ ರೂ. ಮಾತ್ರ. ಇನ್ನೊಂದೆಡೆ ಸರ್ಕಾರದ ಖಜಾನೆಯ ಹಣವನ್ನು ಅವರ ಕಾರ್ಪೊರೇಟ್ ಮಿತ್ರರ ತಿಜೋರಿಗೆ ಸದ್ದಿಲ್ಲದಂತೆ ಹರಿಸಲಾಗಿದೆ. ಈ 10 ವರ್ಷಗಳಲ್ಲಿ ಕಾಪೋರೇಟ್ ಕಂಪನಿಗಳ 55 ಲಕ್ಷ ರೂ. ತೆರಿಗೆಗೆ ವಿನಾಯಿತಿ ನೀಡಲಾಗಿದೆ. 33 ಲಕ್ಷ ಕೋಟಿ ರೂ.ಗಳ ಸಬ್ಸಿಡಿ, ಕನಿಷ್ಟ 100 ಲಕ್ಷ ಕೋಟಿ ರೂ.ಗಳ ಅಮೂಲ್ಯ ಸರ್ಕಾರಿ ಉದ್ದಿಮೆಗಳನ್ನು ಬಿಡಿಗಾಸಿಗೆ ಹರಾಜು ಮಾಡಲಾಗಿದ್ದು ಇದು ಹಗಲು ದರೋಡೆಗೆ ಸಮಾನವಾಗಿದೆ ಎಂದರು.
ಮೋದಿಯವರ ಮಿತ್ರರಾದ ಆದಾನಿ, ಅಂಬಾನಿಯವರ ಆಸ್ತಿ 3 ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ, ಕಪ್ಪು ಹಣ ತರುವುದಿರಲಿ ನಮ್ಮ ಬ್ಯಾಂಕುಗಳಿಗೆ ಸಹಸ್ರಾರು ಕೋಟಿ ಪಂಗನಾಮ ಹಾಕಿದ ನೀರವ್ ಮೋದಿ, ವಿಜಯ್ ಮಲ್ಯರಂತಹ ವಿರುದ್ಧ ಕ್ರಮಕೈಗೊಂಡಿಲ್ಲ, ಇಂದು ಬಿಜೆಪಿ ದೇಶದಲ್ಲಿ ಬೃಹತ್ ಭ್ರಷ್ಟರ ಗ್ಯಾಂಗ್ ಆಗಿ ಪರಿವರ್ತನೆಯಾಗಿದೆ ಎಂದು ಆರೋಪಿಸಿದರು.
ಭಾವನಾತ್ಮಕವಾಗಿ ಭಾರತೀಯರನ್ನು ಹಿಡಿದಿಟ್ಟು ದೇಶವನ್ನು ಕಂಪನಿಗಳ ಪಾಲು ಮಾಡುತ್ತಿರುವ ಬಿಜೆಪಿಯನ್ನು ಈಗಲೂ ಹತ್ತಿಕ್ಕದೆ ಹೋದರೆ ದೇಶದ ಜನ ಸಾಮಾನ್ಯರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಹೋಗುತ್ತದೆ. ಭಾವನಾತ್ಮಕ ಜಾಲಕ್ಕೆ ಸಿಲುಕದೆ ಪ್ರಜ್ಞಾವಂತಿಗೆಯಿಂದ ಈ ಬಾರಿ ಬಿಜೆಪಿಗೆ ವಿರುದ್ಧವಾಗಿ ಮತದಾನ ಮಾಡಬೇಕಿದೆ ಎಂದರು.
ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಮಾತನಾಡಿ, ಎದ್ದೇಳು ಕರ್ನಾಟಕ ವೇದಿಕೆಯಿಂದ ದೇಶ ಉಳಿಸಿ ಸಂಕಲ್ಪ ಯಾತ್ರೆ ಆಯೋಜಿಸುವ ದುಸ್ಥಿತಿ ದೇಶಕ್ಕೆ ಬಂದಿದೆ ಎಂದರೆ, ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇವುಗಳಿಂದ ಬೇಸತ್ತ ಮತದಾರರ ಮನಸ್ಥಿತಿ ಬದಲಾವಣೆಯಾಗಿದೆ, ಅದನ್ನು ಮತಗಳನ್ನಾಗಿ ಪರಿವರ್ತಿಸುವ ಕಾರ್ಯವನ್ನು ಕಾರ್ಮಿಕ ಸಂಘಟನೆಗಳು ಮಾಡಲಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ನೋಟದವರ್ ಮಾತನಾಡಿ, ಉದ್ಯೋಗ ಸೃಷ್ಟಿ, ಎಲ್ಲಾ ಜಾತಿ, ಧರ್ಮದ ಬಡವರ ಹಿತಾಸಕ್ತಿಗಾಗಿ ಎದ್ದೇಳು ಕರ್ನಾಟಕದಿಂದ ಆರಂಭಿಸಿರುವ ದೇಶ ಉಳಿಸಿ ಸಂಕಲ್ಪಯಾತ್ರೆಗೆ ಸಹಕಾರ ನೀಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಕೆ.ಎಚ್. ಆನಂದಮೂರ್ತಿ, ಅಪ್ಪಾ ಸಾಹೇಬ್, ಗೋಣಿ ಬಸಪ್ಪ, ಹೊನ್ನಪ್ಪ ಮರಿಯಪ್ಪನವರ್, ದಲಿತ ಮುಖಂಡ ಮಂಜುನಾಥ, ಮಾನವ ಬಂಧುತ್ವ ವೇದಿಕೆಯ ಮಂಜುನಾಥ್, ಇನ್ಸಾಲ್, ಕೃಷ್ಣಪ್ಪ, ಆಶಾಖ್, ನಿಜಾಮುದ್ದೀನ್ ಸೇರಿದಂತೆ ಇನ್ನೂ ಹಲವು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.