ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಬಸವಣ್ಣ ಅನುಯಾಯಿಗಳು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮಿಗಳು ಮಾತನಾಡಿದ್ದು, “ಬಸವಣ್ಣನವರು ಜಗತ್ತು ಕಂಡ ಮಹಾನ್ ದಾರ್ಶನಿಕರಾಗಿದ್ದರು. ಅವರ ಅದರ್ಶಗಳನ್ನು ದೇಶ ವಿದೇಶಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇಡೀ ಜಗತ್ತು ಬಸವತತ್ವಕ್ಕೆ ಮಾರು ಹೋಗಿದೆ. ಆದರೆ, ಕನ್ನಡ ನಾಡಿನಲ್ಲಿಯೇ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ಖಂಡನೀಯ” ಎಂದರು.
“ಬಸವಣ್ಣನವರು ಇಡೀ ಜಗತ್ತಿಗೆ ಬೆಳಕನ್ನು ನೀಡಿದ್ದಾರೆ. ಪ್ರಜಾಪ್ರಭುತ್ವದ ಮತ್ತು ಶಾಂತಿ ಸೌಹಾರ್ದತೆಯ ರೂವಾರಿಯಾಗಿದ್ದಾರೆ. ಅವರ ಪ್ರತಿಮೆಯನ್ನು ಇಂಗ್ಲೆಂಡಿನಲ್ಲಿ ಪ್ರತಿಷ್ಟಾಪಿಸಿ ಅವರ ತತ್ವವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಕಿಡಿಗೇಡಿಗಳು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಇಂತಹ ಧರ್ಮದ್ರೋಹಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು. ಜೊತೆಗೆ ಮತ್ತೆ ಇಂತಹ ಕೃತ್ಯಗಳಿಗೆ ಕೈ ಹಾಕದಂತಹ ಶಿಕ್ಷೆ ನೀಡಬೇಕು” ಎಂದು ಒತ್ತಾಯಿಸಿದರು.
“ಸಮಾನತೆ ಹರಿಕಾರ ಬಸವಣ್ಣನವರ ವಿಚಾರಧಾರೆಗಳ ಮೇಲೆ ಸಂವಿಧಾನವನ್ನೇ ರಚಿಸಲಾಗಿದೆ. 12ನೇ ಶತಮಾನದ ಶರಣರಲ್ಲಿ ಮುಂಚೂಣಿಯಲ್ಲಿದ್ದ ಇಂತಹ ಮಹಾನ್ ಪುರುಷರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಂಚಿಗನಾಳ್ ರಾಜಪ್ಪ ಬಸವ ಯುವ ಸೇನೆಯ ಅಧ್ಯಕ್ಷ ಪ್ರೀತಮ್, ಕಂಚಿಗನಾಳ್ ಮಂಜಪ ಪಾಂಡೋಮಟ್ಟಿ ಚಂದಪ್ಪ, ದನಂಜಯ ಪಾಂಡೋಮಟ್ಟಿ, ಮುಗಳಿ ಹಳ್ಳಿ, ಇತರ ಹಳ್ಳಿಗಳ ಜನರು ಇದ್ದರು.