ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯಡಿ ವಾಹಿನಿಗಳು ಕಾರ್ಯಕ್ರಮ ಮತ್ತು ಜಾಹಿರಾತು ಸಂಹಿತೆಯನ್ನು ಪಾಲನೆ ಮಾಡಬೇಕು ಮತ್ತು ಕೇಬಲ್ ಆಪರೇಟಗಳು ನಿಗದಿತ ದರಕ್ಕಿಂತ ಹೆಚ್ಚು ವಸೂಲು ಮಾಡಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಕೇಬಲ್‌ನೆಟ್ ವರ್ಕ್ ಕಾಯಿದೆ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಹಾಗೂ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ಆಕ್ಟ್ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಹಾಗೂ ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಯಾಟಲೈಟ್ ಮೂಲಕ ಸಿಗ್ನಲ್ಸ್‌ಗಳನ್ನು ರಿಸೀವರ್ ಮೂಲಕ ಪಡೆದು ಮರು ಪ್ರಸಾರ ಮಾಡುವರನ್ನು ಕೇಬಲ್ ಆಪರೇಟಗಳೆಂದು ಕರೆಯಲಾಗುತ್ತದೆ. ಅಧಿಕೃತ ಕೇಬಲ್ ಆಪರೇಟಗಳು ಜಿಲ್ಲಾ ಮಟ್ಟದ ಪ್ರಧಾನ ಅಂಚೆ ಕಚೇರಿಯಲ್ಲಿ ನೊಂದಣಿ ಮಾಡಿಸಿ ಕೇಬಲ್ ಆಪರೇಟರ್ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಟಿವಿ ಚಾನಲ್‌ಗಳು ಕಾರ್ಯಕ್ರಮ ಮತ್ತು ಜಾಹಿರಾತು ಸಂಹಿತೆಯನ್ನು ಕಾಪಾಡಿಕೊಳ್ಳಬೇಕು. ಆಕ್ಷೇಪಾರ್ಹ ಪದ ಬಳಕೆ, ದೃಶ್ಯಪ್ರಸಾರವನ್ನು ಮಾಡಬಾರದು. ಜನರನ್ನು ಪ್ರಚೋದನೆಗೆ ಗುರಿ ಮಾಡುವ ಮತ್ತು ಹಿಂಸೆಗೆ ಪ್ರಚೋದನಾಕಾರಿಯಾದ ಯಾವುದೇ ದೃಶ್ಯವಾಗಲಿ ಮತ್ತು ಹೇಳಿಕೆಯನ್ನ ಪ್ರಸಾರ ಮಾಡಬಾರದು. ಲಿಂಗತಾರತಮ್ಯವಿಲ್ಲದೆ ಮಹಿಳೆಯರು, ಮಕ್ಕಳ ಮೇಲೆ ಪರಿಣಾಮ ಬೀರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಿರುವ ಬಗ್ಗೆ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು.
ಯಾವುದೇ ಕಾರ್ಯಕ್ರಮ ಮತ್ತು ಜಾಹಿರಾತು ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಈ ಸಮಿತಿಗೆ ದೂರು ನೀಡಲು ಮುಕ್ತ ಅವಕಾಶ ಇರುತ್ತದೆ. ದೂರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕೇಬಲ್ ಆಪರೇಟಗಳು ಗ್ರಾಹಕರಿಗೆ ಗುಣಮಟ್ಟದ ಸೇವೆಯ ಜೊತೆಗೆ ನಿಗದಿ ಮಾಡಿರುವ ದರವನ್ನು ಮಾತ್ರ ಕೇಬಲ್ ಆಪರೇಟಗಳು ಪಡೆದುಕೊಳ್ಳಬೇಕು. ನಿಗಧಿತ ದರಕ್ಕಿಂತ ಹೆಚ್ಚು ದರವನ್ನು ಗ್ರಾಹಕರಿಂದ ವಸೂಲು ಮಾಡಿದಲ್ಲಿ, ಅಂತಹ ಕೇಬಲ್ ಆಪರೇಟಗಳ ಪರಿಕರಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲು ಮಾಡಲಾಗುತ್ತದೆ. ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ದಾಖಲೆಗಳೊಂದಿಗೆ ನೀಡಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿ ಸಮಾಜದಲ್ಲಿ ಗಾಬರಿ ಹುಟ್ಟಿಸುವ ಸಂದೇಶ, ಅಶ್ಲೀಲ ಸಂದೇಶ, ದೃಶ್ಯಗಳನ್ನು ಬಿತ್ತರಿಸುವವರ ಮೇಲೆ ನಿಗಾವಹಿಸಿ ನಾಗರಿಕ ಸಂಹಿತೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಯೂಟ್ಯೂಬಗ್ಗಳು ಸುಳ್ಳು ಸುದ್ದಿಯನ್ನು ಬಿತ್ತರಿಸುವುದು ಮತ್ತು ತಮ್ಮ ಮನಸು ಇಚ್ಛೆ ಸುದ್ದಿಯನ್ನು ಸ್ಪಷ್ಟನೆ ಇಲ್ಲದೆ ಬಿತ್ತರ ಮಾಡಿದಲ್ಲಿ ಅಂತಹವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಹೆಚ್ಚುವರಿ ರಕ್ಷಣಾಧಿಕಾರಿ ಮಂಜುನಾಥ್, ಸೂರ್ತಿ ಸಂಸ್ಥೆ ರೂಪ್ಲಾನಾಯ್ಕ, ಶಿಕ್ಷಣ ತಜ್ಞರಾದ ರುದ್ರಮುನಿ ಹಿರೇಮಠ, ವಕೀಲರಾದ ಸುಜಾತ ಉಪಸ್ಥಿತರಿದ್ದು ತಮ್ಮ ಸಲಹೆಗಳನ್ನು ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಧನಂಜಯ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆ ಅನುಷ್ಟಾನ ಕುರಿತು ಸಭೆಯಲ್ಲಿ ಮಂಡಿಸಿದರು.