ಗ್ರಾಮ ಪಂಚಾಯತಿ ಅಧ್ಯಕ್ಷೆ ದಲಿತೆ ಎಂಬ ಕಾರಣಕ್ಕೆ ಪಂಚಾಯತಿಯ ಸದಸ್ಯರು ಅಭಿವೃದ್ಧಿ ಕೆಲಸಗಳಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ. ಜಾತಿ ತಾರತಮ್ಯ ಎಸಗುತ್ತಿದ್ದಾರೆ ಎಂಬ ಜಾತಿ ದೌರ್ಜನ್ಯದ ಗಂಭೀರ ಆರೋಪ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಲ್ಲಿ ಕೇಳಿಬಂದಿದೆ.
ಬೆನಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಷ್ಮಾ ಗಣೇಶ್ ಅವರು ತಮ್ಮ ಸಹೋದ್ಯೋಗಿ ಸದಸ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಪಂಚಾಯತಿ ಸದಸ್ಯರ ಅಸಹಕಾರದಿಂದ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಲಸಗಳು ಕುಂಠಿತಗೊಂಡಿವೆ ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ (ಮೇ 29) ರೇಷ್ಮಾ ಗಣೇಶ್ ಅವರು ಬೆನಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈವರೆಗೆ ಅವರ ಅಧ್ಯಕ್ಷತೆಯಲ್ಲಿ ಮೂರು ಸಾಮಾನ್ಯ ಸಭೆಗಳು ನಡೆದಿವೆ. ಆದರೆ, ಸಭೆಗಳಲ್ಲಿ ಸದಸ್ಯರು ಭಾಗಿಯಾಗದೆ, ಗೈರು ಹಾಜರಾಗಿದ್ದಾರೆ. ಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಗದೆ, ಸಭೆಗಳನ್ನು ಪದೇ-ಪದೇ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ರೇಷ್ಮಾ ಗಣೇಶ್ ಅವರು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ, ಕಳೆದ ಎರಡು ತಿಂಗಳಿಂದ ಈವರೆಗೆ ಯಾವುದೇ ಗ್ರಾಪಂ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಅಭಿವೃದ್ಧಿ ಕೆಲಸಗಳಲ್ಲಿ ದಲಿತ ಮಹಿಳೆ ಎಂಬ ಕಾರಣಕ್ಕೆ ಸದಸ್ಯರು ಕೈಜೋಡಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಗ್ರಾಮಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ಇತ್ತು. ಆದರೆ, ಸದಸ್ಯರು ಸಹಕಾರ ನೀಡುತ್ತಿಲ್ಲ. ನನಗೆ ದಿಕ್ಕು ತೋಚದಂತಾಗಿದೆ” ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಷ್ಮಾ ಗಣೇಶ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ರಷ್ಯಾ ತೈಲ ಖರೀದಿಸಿದರೆ 500% ಸುಂಕ ಬೆದರಿಕೆ: ಭಾರತದ ಮೇಲೆ ಅಮೆರಿಕ-ನ್ಯಾಟೋ ‘ಇಬ್ಬಂದಿ ನೀತಿ’
“ನಾನು ದಲಿತಳೆಂಬ ಕಾರಣಕ್ಕೆ ಉಳಿದವರು ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ನನ್ನ ಪತಿ ಗ್ರಾಮ ಪಂಚಾಯತಿಯಲ್ಲಿ ನೀರುಗಂಟಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಸಹ ಸದಸ್ಯರಿಗೆ ಕೀಳರಿಮೆಯಾಗಿದೆ. ನನ್ನ ಆಯ್ಕೆ ಮಾಡಿದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಿದೆ” ಎಂದು ಅವರು ಹೇಳಿರುವುದಾಗಿ ‘ವಾರ್ತಾ ಭಾರತಿ’ ವರದಿ ಮಾಡಿದೆ.
ಗ್ರಾಮ ಪಂಚಾಯತಿಯಲ್ಲಿನ ಜಾತಿ ತಾರತಮ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಹೊನ್ನಾಳಿ ತಾಲೂಕು ಪಂಚಾಯತಿ ಇಒ ಪ್ರಕಾಶ್, “ಗ್ರಾಮ ಪಂಚಾಯತಿ ಸದಸ್ಯರು ಸಭೆಗೆ ಸ್ವಯಂ ಪ್ರೇರಿತರಾಗಿ ಬರಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲು ಸಕ್ರಿಯವಾಗಿ ಭಾಗಿಯಾಗಬೇಕು. ಆದರೆ, ಸದಸ್ಯರ ಗೈರಾಗುತ್ತಿರುವುದು ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಮಾಡಿದ ಮೋಸ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.