ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದ ಸ್ಮಶಾನದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮತ್ತು ಪೂರ್ವಜರ ಸಮಾಧಿಗಳನ್ನು ವಿರೂಪ ಗೊಳಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಕಬ್ಬೂರಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ದಾವಣಗೆರೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, “ಕಬ್ಬೂರು ಗ್ರಾಮದಲ್ಲಿ ಸುಮಾರು 30-40 ವರ್ಷಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಮಡಿವಾಳ, ಗೊಲ್ಲ, ಭೋವಿ ಸೇರಿದಂತೆ ಇತರೆ ಜನಾಂಗದವರಿಗೆ ಸೇರಿದ ಸ್ಮಶಾನದಲ್ಲಿ ಎಂಟರಿಂದ ಹತ್ತು ಅಡಿಗಳಷ್ಟು ಆಳಕ್ಕೆ ಬಗೆದು ನೂರಾರು ಲೋಡು ಅಕ್ರಮ ಮಣ್ಣು ಸಾಗಾಟ ಮಾಡಲಾಗಿದೆ. ಪೂರ್ವಜರ ಅಸ್ತಿಪಂಜರಗಳನ್ನು ಕಿತ್ತುಹಾಕಿ ವಿರೂಪ ಗೊಳಿಸಲಾಗಿದೆ. ಸಮಾಧಿಗಳನ್ನು ವಿರೂಪಗೊಳಿಸಿ ನಂಬಿಕೆಗಳಿಗೆ, ಭಾವನೆಗಳಿಗೆ ಧಕ್ಕೆಯುಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನೂರಾರು ಮಂದಿ ಕಬ್ಬೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಮಾತನಾಡಿ, “ಕಬ್ಬೂರಿನ ಗೋಮಾಳದಲ್ಲಿ ಅನೇಕ ತಿಂಗಳಿಂದ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಸ್ಮಶಾನದಲ್ಲಿ ಮಣ್ಣು ಮಾಫಿಯಾ ದಂಧೆಕೋರರು ಪೂರ್ವಜರ ಸಮಾಧಿಗಳನ್ನೂ ಕೂಡಾ ನಾಶ ಮಾಡಿದ್ದು, ಅಲ್ಲಿನ ಅಸ್ಥಿಪಂಜರಗಳ ಯಾವುದೇ ಕುರುಹು ಸಿಗದಂತೆ ಮಾಡಿ ಅಲ್ಲಿನ ಮಣ್ಣನ್ನು ಸಾಗಾಟ ಮಾಡಿ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಆರೋಪಿಸಿದರು.
ದಲಿತ ಮುಖಂಡ ಮಂಜು ಕಬ್ಬೂರು ಮಾತನಾಡಿ, “ಕಬ್ಬೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕೆರೆ ಅಂಗಳ ಮತ್ತು ಗೋಮಾಳ, ಸರ್ಕಾರಿ ಜಮೀನುಗಳು ಒತ್ತುವರಿಯಾಗಿವೆ. ಈಗ ಅಕ್ರಮವಾಗಿ ಮರಳು ಸಾಗಾಟ ಮಾಡುವವರು ಸ್ಮಶಾನವನ್ನೂ ಬಿಟ್ಟಿಲ್ಲ. ಈ ಕೂಡಲೇ ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಮ್ಮ ಪೂರ್ವಜರ ಅಸ್ಥಿಪಂಜರಗಳನ್ನು ಪತ್ತೆಹಚ್ಚಿ ಅದೇ ಸ್ಥಳದಲ್ಲಿ ಸ್ಮಶಾನ ನಿರ್ಮಿಸಿ ಅಲ್ಲಿ ನಾಮಫಲಕಗಳನ್ನು ಅಳವಡಿಸಿಕೊಟ್ಟು, ನೊಂದ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಕೆರೆಯನ್ನು ಒತ್ತುವರಿಮುಕ್ತಗೊಳಿಸಿ ತಡೆಬೇಲಿ ನಿರ್ಮಾಣ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?:ದಾವಣಗೆರೆ | ಹರಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ; ಪಂಚಮಸಾಲಿ ಮಹಾಸಭಾ ಖಂಡನೆ
“ಒತ್ತುವರಿಯಾಗಿರುವ ಗೋಮಾಳದ ಜಾಗವನ್ನು ಒತ್ತುವರಿಮುಕ್ತ ಮಾಡಿಕೊಡಬೇಕು. ಗೋಮಾಳದಲ್ಲಿ ನಿವೇಶನ ಹಾಗೂ ವಸತಿರಹಿತ ಎಸ್‌ಸಿ ಮತ್ತು ಎಸ್‌ಟಿ ಜನಾಂಗದವರಿಗೆ ಸುಮಾರು 10 ಎಕರೆ ಜಾಗದಲ್ಲಿ ವಸತಿಗೆ ಅನುಕೂಲ ಕಲ್ಪಿಸಿಕೊಡಬೇಕು. ಉಳಿದ ಜಾಗವನ್ನು ಜಾನುವಾರುಗಳ ಮೇವಿಗೆ ಮೀಸಲಿಟ್ಟು ಅರಣ್ಯ ಇಲಾಖೆಗೆ ವಹಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಜಯಲಕ್ಷ್ಮಿ, ಎನ್ಎಂ ಕೋಟಿ, ಅಂಜನಪ್ಪ, ಗೋವಿಂದಪ್ಪ, ಬಸವರಾಜಪ್ಪ, ಮಂಜಪ್ಪ, ಕುಮಾರಪ್ಪ, ಮಲ್ಲಿಕಾರ್ಜುನ, ಶೇಖರಪ್ಪ, ಎಂ ರಾಮಚಂದ್ರಪ್ಪ, ಸಂದೀಪ್, ಮಹೇಶ್, ಯಲ್ಲೇಶ, ಮಂಜುನಾಥ ಸೇರಿದಂತೆ ಕಬ್ಬೂರಿನ ನೂರಾರು ಗ್ರಾಮಸ್ಥರು ಇದ್ದರು.
