ದಲಿತ ಹಾಗೂ ಹಿಂದುಳಿದ ವರ್ಗದ ವಸತಿ ರಹಿತ ಕುಟುಂಬಗಳಿಗೆ ಕಡ್ಲೆಗೊಂದಿ ಗ್ರಾಮದಲ್ಲಿ ಸರ್ಕಾರ ಗುರುತಿಸಿರುವ ಜಾಗದಲ್ಲಿ ಶೀಘ್ರವೇ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಮದ ಗ್ರಾಪಂ ಕಚೇರಿಯಲ್ಲಿ ನಡೆದ ಕಡ್ಲೆಗೊಂದಿ ಗ್ರಾಮ ಸಭೆಯಲ್ಲಿ ಭಾಗವಹಿಸಿ ಒತ್ತಾಯಿಸಿದ ಅವರು, ಗ್ರಾಮದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 120 ವಸತಿ ರಹಿತ ಕುಟುಂಬಗಳಿವೆ. ಇವರು ಕೇವಲ ಕೂಲಿಯನ್ನೇ ನೆಚ್ಚಿಕೊಂಡಿರುವರುವ ಕುಟುಂಬಗಳಾಗಿವೆ. ಚಿಕ್ಕ ಚಿಕ್ಕ ಹೆಂಚಿನ, ಶೀಟಿನ ಮನೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ, ಅನೈರ್ಮಲ್ಯತೆಯಲ್ಲಿ ವಾಸಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಡ್ಲೆಗೊಂದಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ಗ್ರಾಪಂ, ತಾಪಂ ಹಾಗೂ ತಾಲೂಕು ಆಡಳಿತದವರು ಗುರುತಿಸಿದ್ದು, ಆದಷ್ಟು ಬೇಗ ಮುಂದಿನ ಪ್ರಕ್ರಿಯೆಗಳನ್ನು ಮಾಡಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸುತ್ತೇವೆ. ವಸತಿ ಸೌಲಭ್ಯ ಒದಗಿಸಲು ಆಗ್ರಹಿಸಿ ತಾಲೂಕು ಕಚೇರಿ ಎದುರು ಸಂಘಟನೆಯಿಂದ 57 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ತಾಲೂಕು ಆಡಳಿತದ ಗಮನ ಸೆಳೆಯಲಾಗಿತ್ತು ಎಂದರು.

ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಲಕ್ಷ್ಮಿಬಾಯಿ ಮಾತನಾಡಿ, ನಿರ್ವಸತಿಗರು ಈಗಾಗಲೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ, ಪ್ರತ್ಯೇಕ ನಿವೇಶನಕ್ಕೆ ಆಗ್ರಹ ಕೇಳಿ ಬಂದಿದ್ದು, ಆ ಕುರಿತು ಸ್ಥಳ ಪರಿಶೀಲನೆ ಮಾಡಿ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಚರ್ಚಿಸಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದೆಂದರು.
ಇದನ್ನು ಓದಿದ್ದೀರಾ? ರಾಯಚೂರು | ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ದಸಂಸದಿಂದ ಪ್ರತಿಭಟನೆ
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಹಾಲೇಶ್, ಉಪಾಧ್ಯಕ್ಷೆ ಮಂಜಮ್ಮ ಮಂಜಪ್ಪ, ಸದಸ್ಯರಾದ ಲೋಕೇಶ್, ಯಶೋಧಮ್ಮ, ಮಾತೆಂಗೆಮ್ಮ,ಜಯಪ್ಪ, ಗಿರಿಗೌಡ್ರು, ತಿಮ್ಮಣ್ಣ, ಮಹೇಶ್ವರಪ್ಪ ಟಿ.ಕೆ., ಗ್ರಾಮದ ಮುಖಂಡರಾದ ಸಂಜೀವ್, ಹನುಮಂತಪ್ಪ, ಬಸವರಾಜ್, ಪರಮೇಶ್, ಲೋಕಪ್ಪ, ರಾಜಪ್ಪ, ಶೀಲಮ್ಮ, ರೇಣುಕಮ್ಮ, ಶಿವಪ್ಪ, ಅಣ್ಣಪ್ಪ, ಸಾಕಮ್ಮ, ಮಲ್ಲಮ್ಮ, ರಂಗಪ್ಪ, ಲಕ್ಷ್ಮಣರೆಡ್ಡಿ, ಕೊಟ್ರೇಶಿ, ನಿಂಗಪ್ಪ ನಂದಿಗಾವಿ ಹಾಗೂ ಇತರ ಗ್ರಾಮಸ್ಥರು ಹಾಜರಿದ್ದರು.
