ದೇಶಾದ್ಯಂತ ದುಡಿಯುವ ಜನತೆಯ ಪ್ರತಿರೋಧ ಆಂದೋಲನಕ್ಕೆ ಕರ್ನಾಟಕ ಶ್ರಮಿಕ ಶಕ್ತಿ ಫೆಬ್ರವರಿ 8ರಂದು ದಾವಣಗೆರೆಯಲ್ಲಿ ಚಾಲನೆ ನೀಡಿತು.
ಈ ವೇಳೆ ಮಾತನಾಡಿದ ಮುಖಂಡರು, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶಿಯ ಮತ್ತು ವಿದೇಶಿಯ ಬಂಡವಾಳಶಾಹಿಯ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಬೀದಿಯಲ್ಲಿ ಸಾವಿರಾರು ಕಿ.ಮೀ ಆಹಾರಕ್ಕಾಗಿ ಅಲೆದು ಪ್ರಾಣವನ್ನು ತೆತ್ತರೂ, ಸಹ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದನ್ನು ಕಾಣಬಹುದಾಗಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಬಂಡವಾಳಶಾಹಿಗಳಿಗೆ ಸಹಸ್ರಾರು ಕೋಟಿಗಳ ಲಾಭವನ್ನು ಮಾಡಿಕೊಳ್ಳಲು ಅವಕಾಶಮಾಡಿಕೊಟ್ಟಿತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನ ಸಂದರ್ಭದಲ್ಲಿ ಕಾರ್ಮಿಕರು ಹಲವಾರು ವರ್ಷಗಳ ಹೋರಾಟದಿಂದ ಪಡೆದ ಕಾರ್ಮಿಕ ಕಾನೂನುಗಳನ್ನು ಮೊಟಕು ಗೊಳಿಸಿ 4 ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಕಿಡಿಕಾರಿದ್ದಾರೆ.
ಇಂದು ಕಾರ್ಮಿಕರು ಶಾಶ್ವತ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಎಲ್ಲ ಕ್ಷೇತ್ರದಲ್ಲೂ ಗುತ್ತಿಗೆ ಪದ್ಧತಿ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೊಸ ಕಾರ್ಮಿಕ ಕಾನೂನುಗಳಿಂದ ಕಾರ್ಮಿಕ ಸಂಘಗಳನ್ನು ರಚಿಸಿಕೊಳ್ಳುವುದು ಕಷ್ಟಕರವಾಗುತ್ತದೆ. ಮಾಲೀಕರ ಮತ್ತು ಕಾರ್ಮಿಕರ ನಡುವಿನ ಸಾಮೂಹಿಕ ಚೌಕಾಸಿಯು ಮೊಟಕುಗೊಳ್ಳದೆ, ಅಲ್ಲದೆ ಕಾರ್ಮಿಕರು ಪ್ರತಿಭಟನೆ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.
ಕೆಲಸದ ಅವಧಿಯನ್ನು ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗುತ್ತದೆ. ಹೀಗೆ ಹಲವಾರು ಕಾನೂನುಗಳನ್ನು ಪಡೆದ ಶ್ರಮಿಕ ವರ್ಗವು ಹೊಸ ಕಾರ್ಮಿಕ ಸಂಹಿತೆಗಳಿಂದ ಎಲ್ಲವನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಡಿಯುವ ವರ್ಗ ಬಹು ದೊಡ್ಡ ಬಿಕ್ಕಟ್ಟಿಗೆ ಸಿಲುಕಲಿದ್ದು ಬಂಡವಾಳಶಾಹಿ ವರ್ಗದಿಂದ ನಿರಂತರವಾಗಿ ಶೋಷಣೆಗೆ ಒಳಗಾಗಳಿದೆ. ಈ ಎಲ್ಲಾ ಕಾರಣಗಳಿಂದ ಇದು ಮತ್ತೆ ಕಾರ್ಮಿಕ ವರ್ಗವು ಐಕ್ಯ ಹೋರಾಟಕ್ಕೆ ತನ್ನನ್ನು ತಾನು ಸಂಘಟಿಸಿಕೊಳ್ಳಬೇಕಿದೆ. ಮತ್ತು ದುಡಿಯುವ ವರ್ಗದ ಮೇಲಿನ ನಿರಂತರ ದಾಳಿಯ ವಿರುದ್ಧ ಹೋರಾಟವನ್ನು ಮುನ್ನಡೆಸುವ ಕೆಲಸವನ್ನು ಕರ್ನಾಟಕ ಶ್ರಮಿಕ ಶಕ್ತಿಯು ಕಳೆದ ಒಂದು ದಶಕಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ.
ಆದಕಾರಣ ಫೆ. 8 ಮದ್ದೂರ್ ಅಧಿಕಾರ ಸಂಘರ್ಷ ಅಭಿಯಾನದ ಕರೆ ನೀಡಿದ್ದು, ದೇಶಾದ್ಯಂತ ಕಾರ್ಮಿಕರ ಪ್ರತಿರೋಧ ಆಂದೋಲನಕ್ಕೆ ಇಂದು ಚಾಲನೆ ನೀಡುತ್ತಿದ್ದೇವೆ ಎಂದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಕಾರ್ಮಿಕರಿಗಾಗಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆದು, ಕಾರ್ಮಿಕರ ಹಕ್ಕುಗಳನ್ನು ಖಾತ್ರಿ ಪಡಿಸಬೇಕು, ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರದ ಖಾಸಗೀಕರಣವನ್ನು ನಿಲ್ಲಿಸಬೇಕು, ಮಾಸಿಕ 26 ಸಾವಿರ ರೂಪಾಯಿಗಳ ಕನಿಷ್ಠ ವೇತನ ಜಾರಿಯಾಗಬೇಕು. ಅನ್ನಭಾಗ್ಯ ಯೋನೆಯಡಿಯ ಹಮಾಲಿ ಕಾರ್ಮಿಕರಿಗೆ ನೇರ ಪಾವತಿ ಸಂಬಳ ( ಡಿಪಿಎಸ್) ವ್ಯವಸ್ಥೆ ಜಾರಿಯಾಗಬೇಕು.
ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸಮಗ್ರ ಯೋಜನೆಗಳು ಸರಿಯಾಗಿ ಜಾರಿಗೆ ತರಬೇಕು ಮತ್ತು ಇ ಎಸ್ ಐ ಸೌಲಭ್ಯ ನೀಡಬೇಕು . ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಆದರಲ್ಲೂ ಹಮಾಲಿ- ಟೈಲರ್- ಮೆಕಾನಿಕ್- ಮನೆಕೆಲಸ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಬೇಕು ಎನ್ನುವ ಹಕ್ಕೊತ್ತಾಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಉಮೇಶ್ ಆವರಗೆರೆ, ಜನಶಕ್ತಿಯ ಪವಿತ್ರ, ಸತೀಶ್ ಅರವಿಂದ್, ರಫೀಕ್, ಆದಿಲ್ ಖಾನ್, ರಾಮಾಂಜನೇಯ ಇತರ ಕಾರ್ಯಕರ್ತರು ಹಾಜರಿದ್ದರು.