ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆ ಎಂದು ದಾವಣಗೆರೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಸ್.ಕೆ. ಬಸವರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯವು 60ಲಕ್ಷ ಜನ ಸಂಖ್ಯೆ ಹೊಂದಿದೆ. ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಹಾಗೂ ಆರ್ಥಿಕ ಬಲವರ್ಧನೆಗಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಲಾಗಿತ್ತು. ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆ ಪರಿಣಾಮ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂತು. ಇಷ್ಟಾದರೂ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮವು ಇನ್ನು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸದಿರುವುದು ನೇಕಾರ ಸಮುದಾಯಕ್ಕೆ ನಿರಾಶೆ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಮುಖ್ಯಮಂತ್ರಿಗಳು ಗಮನಹರಿಸಿ ನಿಗಮದ ಕಾರ್ಯಾರಂಭಕ್ಕೆ ಸಂಬಂಧಪಟ್ಟವರಿಗೆ ಆದೇಶ ನೀಡಬೇಕು. ಇತ್ತೀಚೆಗೆ ‘ಜಾತಿಗಣತಿ’ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ‘ಜಾತಿಗಣತಿ’ ಸಮೀಕ್ಷೆ ಪೂರ್ಣಗೊಂಡಿತ್ತು. ಅನೇಕ ಕಾರಣ ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದಾರೆ. ಆದಕಾರಣ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲ ತಂದುಕೊಡಬಲ್ಲ ‘ಜಾತಿಗಣತಿ’ ವರದಿಯನ್ನು ಸ್ವೀಕರಿಸಬೇಕೆಂದು ನೇಕಾರ ಸಮುದಾಯಗಳ ಪರವಾಗಿ ಒತ್ತಾಯಿಸಿದರು.
ರಾಜ್ಯದಲ್ಲಿ ವಿವಿಧ ಹೆಸರುಗಳಿಂದ ತೊಡಗಿಕೊಂಡಿರುವ ನೇಕಾರ ಸಮದಾಯಗಳು ಸಂಘಟನೆ ಪ್ರದರ್ಶಿಸುವ ಉದ್ದೇಶದಿಂದ ಫೆಬ್ರವರಿ ತಿಂಗಳಿನಲ್ಲಿ ಬಾಗಲಕೋಟೆಯಲ್ಲಿ ನೇಕಾರರ ಸಮಾವೇಶ ಆಯೋಜಿಸಲಾಗಿದೆ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸಮಾವೇಶದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಸಮಾವೇಶದಲ್ಲಿ ಬಾಗಲಕೋಟೆ, ಗದಗ-ಬೆಟಗೇರಿ, ಹಾವೇರಿ, ರಾಯಚೂರು, ಕಲಬುರಗಿ, ಬೀದರ್ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಿಂದ ನೇಕಾರ ಸಮಾಜದವರು ಭಾಗವಹಿಸಲಿದ್ದಾರೆ. ಈಗಾಗಲೇ ಸಮಾವೇಶದ ಸಿದ್ಧತೆಗಳು ಆರಂಭಗೊಂಡಿವೆ. ನೇಕಾರಿಕೆ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಯೋಜನೆ ಮತ್ತು ಕಾರ್ಯಕ್ರಮಗಳು, ನೇಕಾರಿಕೆಯಿಂದ ಹೊರಗುಳಿದಿರುವ ನೇಕಾರರನ್ನು ಮರಳಿ ನೇಕಾರಿಕೆಗೆ ಬರುವಂತೆ ಮಾಡಲು ಸರ್ಕಾರ ಕೈಗೊಳಬೇಕಿರುವ ಕ್ರಮಗಳ ಕುರಿತು ಸಮಾವೇಶದಲ್ಲಿ ಸರ್ಕಾರದ ಗಮನಕ್ಕೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗುಬ್ಬಿ ಶ್ರೀನಿವಾಸ್, ಡಿ. ಬಸವರಾಜ್ ಇಂಡಿ, ವಿಠಲ ಅಮಾಸಿ, ನಾಗರಾಜ್, ಪರಶುರಾಮ್, ಚಂದ್ರು, ಮಂಜುನಾಥ್, ಪಾಲಾಕ್ಷಪ್ಪ, ಪರಶುರಾಮ ನಂದಿಗಾವಿ ಮತ್ತಿತರರು ಇದ್ದರು.