ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಸೋಲು ಅನುಭವಿಸದ್ದಾರೆ. ಅವರ ಸೋಲಿನ ಬೆನ್ನಲ್ಲೇ, ದಾವಣಗೆರೆ ಬಿಜೆಪಿಯಲ್ಲಿ ಅಸಮಾಧಾನ, ಒಳಜಗಳ ಭುಗಿಲೆದ್ದಿದೆ. ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಮಾಡಾಳ್ ಮಲ್ಲಿಕಾರ್ಜುನ ಮತ್ತು ಹರಿಹರ ಬಿಜೆಪಿ ಶಾಸಕ ಪಿ ಹರೀಶ್ ನಡುವೆ ವಾಗ್ದಾಳಿ ತೀವ್ರಗೊಂಡಿದೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರಿಹರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್, “ನನಗೆ ಮಾಡಾಳ್ ಮಲ್ಲಿಕಾರ್ಜುನ್ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ. ‘ನೋಡ್ಕೋಳ್ತೇನೆ, ಹುಚ್ಚು ಬಿಡಿಸ್ತೀನಿ’ ಅಂತ ಹೇಳಿದ್ದಾರೆ. ಮಾಡಾಳ್ ಸೇರಿಂದತೆ ‘ಡೆಲ್ಲಿ ಬಾಯ್ಸ್ ಅಂಡ್ ಟೀಂ’ಅನ್ನು ಯಾವ ಮುಖವಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಲಿಲ್ಲ ಎಂಬ ನೋವಿದೆ. ಕಳೆದ ಅವಧಿಯಲ್ಲಿ ಅನೇಕ ಹಗರಣ ಮಾಡಿದ್ದ ಹಲವಾರು ಶಾಸಕರು, ಸಚಿವರಲ್ಲಿ ಮಾಡಾಳ್ ಅವರ ತಂದೆ ಮಾಡಾಳ್ ವಿರೂಪಾಕ್ಷಪ್ಪ ಕೂಡ ಒಬ್ಬರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 66 ಸ್ಥಾನ ಬರಲು ಮಾಡಾಳ್ ವಿರೂಪಾಕ್ಷಪ್ಪ ಮಾಡಿದ ಭ್ರಷ್ಟಾಚಾರವೂ ಕಾರಣ. ನನ್ನನ್ನು ನೋಡಿಕೊಳ್ಳುತ್ತಾನಂತೆ, ಹುಚ್ಚು ಬಿಡಿಸ್ತಾನಂತೆ. ಇವೆಲ್ಲಾ ನನ್ನ ಬಳಿ ನಡೆಯೋದಿಲ್ಲ” ಎಂದಿದ್ದಾರೆ.
“ಮೋದಿ ಅವರನ್ನು ಪ್ರಧಾನಿ ಮಾಡಲು ಹೋರಾಡಿದ ನಾವೆಲ್ಲರೂ ಇಲ್ಲಿದ್ದೇವೆ. ಮೋದಿ ಅವರನ್ನು ಸೋಲಿಸಿದವರು ದೆಹಲಿಗೆ ಹೋಗಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ವ್ಯವಸ್ಥಿತ ಪಿತೂರಿ ಕಾರಣ. ಕಾರ್ಯಕರ್ತರು ಯೋಚನೆ ಮಾಡಲೇಬೇಕಿದೆ. ಯಾರಾದರೂ ಒಬ್ಬರು ಸತ್ಯವನ್ನು ಹೇಳಬೇಕು. ಆ ಕೆಲಸ ನಾನು ಮಾಡಿದ್ದೀನಿ. ನಾನು ಮಾಡಿದ್ದೇ ಸರಿ ಎಂದು ಹೈಕಮಾಂಡ್‌ಗೆ ಬ್ವಾಕ್‌ಮೇಲ್ ಮಾಡುವ ಮೂಲಕ ದುಷ್ಟಶಕ್ತಿಗಳು ವಿಜೃಂಭಿಸುತ್ತಿವೆ” ಎಂದು ಹರೀಶ್ ಕಿಡಿಕಾರಿದ್ದಾರೆ.
ಸಭೆಯಲ್ಲಿ ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ, ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಹೆಚ್. ಪಿ. ರಾಜೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ, ದೇವರಮನಿ ಶಿವಕುಮಾರ್, ಜಿ. ಎಸ್. ಅಶ್ವಿನಿ, ಜಿ. ಎಸ್. ಶ್ಯಾಮ್, ಜಗದೀಶ್, ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು.