ಎರಡು ಬಾರಿ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಯಾಗಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಇದೀಗ ಸಮಸ್ಯೆಗಳ ಸರಮಾಲಿಯೇ ಎದುರಾಗಿವೆ. ದಾವಣಗೆರೆ ಜಿಲ್ಲಾ ಪಂಚಾಯತಿ ಮತ್ತು ಜಗಳೂರು ತಾಲೂಕು ಪಂಚಾಯತಿ ಆಯೋಜಿಸಿದ್ದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಸಿಇಒ ಸುರೇಶ್ ಇಟ್ನಾಳ್, ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಇತ್ಯರ್ಥ ಪಡಿಸಿದರು. ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿಕೊಂಡರು.
“ಸೊಕ್ಕೆ ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನು ಕೆಲವು ಸಮಸ್ಯೆಗಳಿಗೆ ಸ್ವಲ್ಪ ವಿಳಂಬವಾಗಬಹುದು ಆದರೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನಮ್ಮ ಮಿತಿಯೊಳಗೆ ಬಗೆಹರಿಸಲಾಗುವುದು” ಎಂದರು.
ಸೊಕ್ಕೆ ಗ್ರಾಮದ ಕ್ಯಾಂಪ್ ಮತ್ತು ಚಿಕ್ಕಬಂಟನಹಳ್ಳಿಯಲ್ಲಿ ಸರಕಾರಿ ಜಮೀನು ಇದ್ದು, ಆಶ್ರಯ ನಿವೇಶನ ಎಂದು ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಹಕ್ಕುಪತ್ರದ ನಂತರ ಇ-ಸ್ವತ್ತು ವಿತರಿಸುವ ಕೆಲಸ ಆಗಬೇಕಿದೆ. ಕೆಲವರು ಕ್ಯಾಂಪ್‌ನಲ್ಲಿ ಗುಡಿಸಲು ಕಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪ್ರಾಮಾಣಿಕವಾಗಿ ಆಗಬೇಕು. ಕೇಸ್ ಕೋರ್ಟ್ ನಲ್ಲಿ ಇದ್ದರೆ ಗ್ರಾಮ ಸಭೆಯಲ್ಲಿ ನಡಾವಳಿ ಮಾಡಿ ಗುಡಿಸಲು ತೆರವುಗೊಳಿಸಲು ನೋಟಿಸ್ ನೀಡಿ.
ಯಾರು ಅರ್ಹ ಫಲಾನುಭವಿಗಳಿದ್ದಾರೆ ಅಂತವರಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಿಂದ ಅನುದಾನ ನೀಡಲು ಸಾಧ್ಯವಿದೆ. ಅದಕ್ಕೂ ಮೊದಲು ಗ್ರಾಮ ಸಭೆಯಲ್ಲಿ ಚರ್ಚಿಸಿ ಕೋರ್ಟ್ ಗಮನಕ್ಕೆ ತಂದು ತುರ್ತಾಗಿ ಕೆಲಸ ಮಾಡಿ ಎಂದು ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿಸಿದರು.
ಸ್ವಚ್ಛ ಸಂಕೀರ್ಣಕ್ಕೆ ಅನುದಾನ ಬರುವಂತೆ ಮಾಡುತ್ತೇನೆ. ಹಳ್ಳ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಲು ಸೂಚನೆ ನೀಡಲಾಗಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.
ಚಿಕ್ಕಬಂಟನಹಳ್ಳಿ ಮತ್ತು ಸೊಕ್ಕೆ ಗ್ರಾಮದಲ್ಲಿ ಸ್ಮಶಾನ ಒತ್ತುವರಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದೀರಿ. ಈ ಸಮಸ್ಯೆಯನ್ನು ಡಿಡಿಎಲ್‌ಆರ್ ಗಮನಕ್ಕೆ ತಂದು ಸರ್ವೆ ಮಾಡಿಸಲಾಗುವುದು ಎಂದು ತಿಳಿಸಿದರು.
ಸೊಕ್ಕೆ ಗ್ರಾಮ ದೊಡ್ಡ ಹೋಬಳಿಯಾಗಿದ್ದು ಈ ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾವಣಗೆರೆ ನಗರಕ್ಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ಆದರೆ ಸಾರ್ವಜನಿಕ ಸಾರಿಗೆ ಇಲ್ಲ ಎಂದು ಗ್ರಾಮಸ್ಥರು ಸಿಇಒ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಅವರು ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಗ್ರಾಮದಲ್ಲಿ ಸುಸಜ್ಜಿತ ಪಶು ಆಸ್ಪತ್ರೆಯಿದ್ದರೂ ಪಶುವೈದ್ಯ ಪರೀಕ್ಷಕರೇ ಇಲ್ಲ ಎಂದು ಸಾರ್ವಜನಿಕರು ನೀಡಿದ ದೂರಿಗೆ ತಕ್ಷಣವೇ ಸ್ಥಳದಲ್ಲಿ ಇದ್ದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಅವರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲು ತಿಳಿಸಿದರು.
ನಿಮ್ಮ ಪಂಚಾಯಿತಿಗೆ ರಸ್ತೆ, ನೀರು, ಚರಂಡಿ ಮತ್ತು ಜೆಜೆಎಂ ಕಾಮಗಾರಿಯನ್ನು ಅನುದಾನ ಆದ್ಯತೆ ಅನುಸಾರ ನೀಡಲಾಗುವುದು. ಏನೇ ಸಮಸ್ಯೆಯಿದ್ದರೂ ಮುಕ್ತವಾಗಿ ಹೇಳಿಕೊಳ್ಳಿ. ಸಮಸ್ಯೆ ಬಗೆಹರಿಸಲು ನಾವೆಲ್ಲ ಬಂದಿದ್ದೇವೆ. ನಿಮ್ಮ ದೂರು ಮತ್ತು ಮನವಿಗಳನ್ನು ಪಟ್ಟಿಮಾಡಿಕೊಂಡಿದ್ದೇನೆ. ಅಧ್ಯಕ್ಷರು, ಸದಸ್ಯರು 15 ದಿನದ ಒಳಗಾಗಿ ಕಚೇರಿಗೆ ಬಂದು ಸಮಸ್ಯೆ ಬಗೆಹರಿದಿದೆಯಾ, ಇಲ್ಲವೇ ಎಂದು ನಮ್ಮ ಗಮನಕ್ಕೆ ತನ್ನಿ ಎಂದು ಸಿಇಒ ಸುರೇಶ್ ಬಿ. ಇಟ್ನಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಸಿಇಒ ಕೆ.ಟಿ. ಕರಿಬಸಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಸಾದಿಕ್ ಉಲ್ಲಾ, ನರೇಗಾ ಎಡಿ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಗ್ರಾಪಂ ಅಧ್ಯಕ್ಷ ತಿರುಮಲಾ, ಉಪಾಧ್ಯಕ್ಷರಾದ ಚೌಡಮ್ಮ, ಪಿಡಿಒ ಶಿವಕುಮಾರ್, ಬಿಇಒ ಹಾಲಮೂರ್ತಿ, ಡಿ.ಡಿ.ಹಾಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸುತ್ತಲಿನ ಗ್ರಾಮಸ್ಥರು ಹಾಜರಿದ್ದರು.