ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆಯಲ್ಲಿ ವಿನಾಯಕ ಹಾಗೂ ಬಸವೇಶ್ವರ ಯುವಕರ ಸಂಘವು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿದೆ. ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆದಿದೆ.
ಗ್ರಾಮದಲ್ಲಿ ಸಂಘವು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದೆ. ಅದರ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ ನಡೆದಿದ್ದು, ಗ್ರಾಮದ ಹಲವಾರು ಯುವಜನರು ರಕ್ತದಾನ ಮಾಡಿದ್ದಾರೆ.
ಶಿಬಿರವನ್ನು ಉದ್ದೇಶಿಸಿ ಮಾನತಾಡಿದ ಡಾ. ರವಿಕುಮಾರ್, “ವೇಗದ ಮತ್ತು ಆಧುನಿಕ ಜಗತ್ತಿನಲ್ಲಿ ‘ಎಲ್ಲ ಸಂಪತ್ತು, ಐಶ್ವರ್ಯಕ್ಕಿಂತಲೂ ಆರೋಗ್ಯವೇ ಭಾಗ್ಯ’ ಎಂಬ ಸತ್ಯ ಎಲ್ಲರಿಗೂ ಈಗ ಅರ್ಥವಾಗಿದೆ. ಆದರೆ, ಕೆಲಸದ ಒತ್ತಡ, ಸಮಯದ ಅಭಾವ ಮತ್ತು ಆಸ್ಪತ್ರೆಗಳ ಅಲಭ್ಯತೆ ಕಾರಣದಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದರೆ, ಇದರಿಂದಾಗಿ ಅನಿರೀಕ್ಷಿತವಾಗಿ ದೊಡ್ಡ ಅಪಾಯಗಳು ಎದುರಾಗುವ ಸಂಭವ ಹೆಚ್ಚಿರುತ್ತದೆ. ಇದರ ಭಾಗವಾಗಿಯೇ ಇತ್ತೀಚಿಗೆ ಹೃದಯಾಘಾತ, ಮಧುಮೇಹ. ರಕ್ತದೊತ್ತಡ, ಕ್ಯಾನ್ಸರ್‌ನಂತಹ ಸಮಸ್ಯೆಗಳು ಎದುರಾಗುತ್ತಿವೆ” ಎಂದರು.
“ಸಂತೋಷಕರ ಜೀವನಕ್ಕೆ ಆರೋಗ್ಯವಂತ ದೇಹ ಮತ್ತು ಮನಸು ಮುಖ್ಯವಾಗುತ್ತದೆ. ಹಾಗಾಗಿ, ದೈನಂದಿನ ಕ್ರಮದಲ್ಲಿ ಉತ್ತಮ ಹವ್ಯಾಸ-ಆಹಾರಪದ್ಧತಿ, ಯೋಗ, ಧ್ಯಾನಗಳನ್ನು ರೂಢಿಸಿಕೊಳ್ಳ ಬೇಕು. ಜತೆಗೆ ಕರುಣೆ, ಸ್ನೇಹ, ಪರೋಪಕಾರ, ಪ್ರೀತಿಯೆಂಬ ಭಾವನೆಗಳನ್ನು ಮನಸ್ಸನ್ನು ಸದಾ ಆರೋಗ್ಯವಾಗಿ ಇರಿಸುತ್ತವೆ” ಎಂದು ಹೇಳಿದರು.
ತಪಾಸಣೆ ಶಿಬಿರದಲ್ಲಿ ಜಗಳೂರಿನ ಮಾಜಿ ಶಾಸಕ ಗುರುಸಿದ್ಧನಗೌಡ, ವೈದ್ಯರಾದ ಶಾಹಿದ್, ಉದ್ಯಮಿಗ ಳಾದ ನಾಗರಾಜ ಸ್ವಾಮಿ, ಟ್ರಸ್ಟ್ ಸಿಬ್ಬಂದಿಗಳಾದ ನುಂಕೇಶ್, ಪವನ್ ಶೇಪೂರ್, ಶ್ವೇತಾ, ಗೌರಿ, ವಿಜಯ್ ಸೇರಿದಂತೆ ಹಲವರು ಭಾಗಿಯಾಗಿದ್ದರು.