ದಾವಣಗೆರೆ ಜಿಲ್ಲೆಯಲ್ಲಿ ಸಕ್ರಿಯವಾಗಿ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿರುವ ಕಾಂಗ್ರೆಸ್ ಮುಖಂಡ ಜಿ.ಬಿ ವಿನಯ್ ಕುಮಾರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಮಾನಿಗಳ ಬಳಗದ ರಘುದೊಡ್ಮನಿ, “ಜಿಲ್ಲೆಯ ಹಿಂದುಳಿದ ವರ್ಗದವರ ಶೋಷಿತರ ದೀನದಲಿತರು ಹಾಗೂ ಅಲ್ಪಸಂಖ್ಯಾತರು ಸಾಕಷ್ಟು ಬಾರಿ ಶಾಮನೂರು ಕುಟುಂಬಕ್ಕೆ ಪ್ರತೀ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಕೊಟ್ಟಿದ್ದಕ್ಕೆ ಅವರು ಗೆದ್ದು ಮತದಾರರ ಹಾಗೂ ಜಿಲ್ಲೆಯ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ” ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಶಾಮನೂರು ರವರ ಕೊಡುಗೆ ಅಪಾರ. ಆದರೆ, ನಾವು ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ವರ್ಗದ ವಿದ್ಯಾವಂತ, ಸರಳ ಜೀವಿ, ಯುವಕರ ಕಣ್ಮಣಿ, ಹಳ್ಳಿ ಹುಡುಗ ಜಿ.ಬಿ. ವಿನಯ್ ಕುಮಾರ್ ರವರನ್ನು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿಸಿ ಇವರನ್ನು ಜಯಶೀಲರನ್ನಾಗಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ದೇಶಸೇವೆ ಮಾಡುವ ಅವಕಾಶ ಕೊಡಲು ಬಯಸುತ್ತೇವೆ ಎಂದರು.
ಈ ಬಾರಿ ನಮ್ಮ ಜಿಲ್ಲೆಗೆ ಜಾತಿಮತ ಬೇಧವಿಲ್ಲದೆ ಸರಳ ಸಜ್ಜನಿಕೆಯ ಜಿ.ಬಿ. ವಿನಯ್ ಕುಮಾರ್‌ರವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿಸಿ ಸಾಮಾಜಿಕ ನ್ಯಾಯ ಮಾಡುತ್ತದೆಂದು ನಂಬಿದ್ದೇವೆ ಎಂದರು.
ಪ್ರತಿಯೊಬ್ಬರು ಅವಶ್ಯವಿರುವ ಶಿಕ್ಷಣಕ್ಕೆ ಮೊದಲ ಆದ್ಯತೆ, ಕ್ಷೇತ್ರದ ಅಭಿವೃದ್ಧಿಯ ಕನಸು, ಹಿಂದುಳಿದ ಶೋಷಿತರ ದೀನದಲಿತರ ಅಲ್ಪಸಂಖ್ಯಾತರ ಅಭಿವೃದ್ಧಿಯಿಂದಲೇ ದೇಶಾಭಿವೃದ್ಧಿ, ಹಳ್ಳಿಯ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿಯ ಸಾರುವ ಈ ಹೊಸಮುಖ ನಮ್ಮ ಅಭ್ಯರ್ಥಿಯಾಗಬೇಕು ಎಂಬುದು ಮತದಾರರ ಮನದಾಳದ ಮಾತು ಎಂದರು.
ದಾವಣಗೆರೆ ಜಿಲ್ಲೆಗೆ ಕುಟುಂಬದ ರಾಜಕಾರಣ ಹೋಗಲಾಡಿಸಲು ಇದೇ ಸೂಕ್ತ ಸುಸಮಯ, ಒಂದುವೇಳೆ ಜಿ.ಬಿ. ವಿನಯ್ ಕುಮಾರ್‌ರವರನ್ನು ಕಡೆಗಣಿಸಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದರೆ ಜಿಲ್ಲೆಯಲ್ಲಿ ಆಸಮಧಾನ ಉಂಟಾಗಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದರು. ಎಐಸಿಸಿ ವೀಕ್ಷಕರ ಪ್ಯಾನಲ್ ನಲ್ಲಿ ಕೊನೆಯ ಹಂತದವರೆಗೂ ವಿನಯ್ ಕುಮಾರ್ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ, ಹಣ ಹಾಗೂ ಒಳರಾಜಕಾರಣ ಕೆಲಸ ಮಾಡಿದೆ ಎಂದರು.
ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಅಭಿಮಾನಿ ಬಳಗದವರು ಒತ್ತಾಯಿಸಿದ್ದೇವೆ. ಸಮೀಕ್ಷೆಗಳ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಹೇಳಿದ ಮುಖಂಡರು ತಮ್ಮ ನಿಲುವು ಬದಲಾಯಿಸಿರುವುದು ಸರಿಯಲ್ಲ. ಜನರಭಾವನೆಗಳಿಗೆ ಜನಾಭಿಪ್ರಾಯದಂತೆ ಗೆಲ್ಲುವ ವ್ಯಕ್ತಿಗೆ ಅನ್ಯಾಯ ಮಾಡಬಾರದು.ನಾಳೆ ವಿನಯ್ ಕುಮಾರ್ ದಾವಣಗೆರೆಗೆ ಆಗಮಿಸುತ್ತಿದ್ದು ನಂತರ ಸಭೆ ನಡೆಸಿ ತಮ್ಮ ತೀರ್ಮಾನ ಹೇಳಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಒಂದಾಗಿದೆ. ವಿನಯ್ ಕುಮಾರ್ ಅವರಿಗೆ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಗೆಲುವು ಕಳೆದುಕೊಳ್ಳಬೇಕಾಗುತ್ತದೆ. ಅಹಿಂದ ಯುವಕನಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೇ ವಿದ್ಯಾವಂತ ಸಮುದಾಯ ಕಡೆಗಣಿಸಿದ ಕಳಂಕ ಕಾಂಗ್ರೆಸ್ ಗೆ ತಟ್ಟುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದಂತೆ ದಾವಣಗೆರೆಯಲ್ಲಿಯೂ ಸ್ವಾಭಿಮಾನದ ಪ್ರತಿಷ್ಠೆಯ ಕಣವಾಗಲಿದೆ. ನಮ್ಮ ಹೋರಾಟ ವ್ಯಕ್ತಿ ಅಥವಾ ಕುಟುಂಬದ ವಿರುದ್ಧ ಅಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಉಮೇಶ್ ಕೆ.ಸಂತೆಬೆನ್ನೂರು, ಮಹಮ್ಮದ್ ಅಲ್ತಾಫ್ ಹುಸೇನ್, ಬಸವನಗೌಡ, ಹೇಮಂತ್ ಕುಮಾರ್ ದಳವಾಯಿ, ಇರ್ಫಾನ್, ಶಿವಕುಮಾರ್, ವಿಜಯಕುಮಾರ್, ನಾಗರಾಜ್, ಪರಶುರಾಮ್ ಸೇರಿದಂತೆ ಅನೇಕರಿದ್ದರು.