ದಾವಣಗೆರೆ ನಗರದ ವರ್ತುಲ ರಸ್ತೆಯ ಬಿಸಿಎಂ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯದ ಊಟದಲ್ಲಿ ಕಲ್ಲು ಇರುತ್ತದೆ, ಆಹಾರ ರುಚಿ ಇರುವುದಿಲ್ಲ, ವಾರದಲ್ಲಿ ನಾಲ್ಕು ಬಾರಿ ಫುಲಾವ್ ಮಾಡಿ ಕೊಡುತ್ತಾರೆ ಅದರಲ್ಲೂ ತರಕಾರಿ ಹಾಕುವುದಿಲ್ಲ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಅವರೆದುರು ವಸತಿ ನಿಲಯದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ದಿನನಿತ್ಯ ಮೆನು ಬದಲಾಯಿಸಬೇಕು. ಹಾಸ್ಟೆಲ್ ಸ್ವಚ್ಚತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನಿವಾರಿಸಲು ಅವರು ತಿಳಿಸಿದರು.
ಗ್ರಂಥಾಲಯ ಸೌಲಭ್ಯವಿಲ್ಲ, ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ, ಮಂಚಗಳು ಇಲ್ಲದೆ ಕೆಲವು ವಿದ್ಯಾರ್ಥಿಗಳು ನೆಲದ ಮೇಲೆಯೇ ಮಲಗುತ್ತಿದ್ದು, ಹಾಸ್ಟೆಲ್‌ಗೆ ವೈದ್ಯರು ಭೇಟಿ ನೀಡುವುದಿಲ್ಲ. ಒಂದು ಕೊಠಡಿಯಲ್ಲಿ 10ರಿಂದ 20ವಿದ್ಯಾರ್ಥಿಗಳು ಇದ್ದು, ಸೋಲಾರ್ ಇದ್ದರೂ ಸ್ನಾನಕ್ಕೆ ಬಿಸಿನೀರು ದೊರೆಯುವುದಿಲ್ಲ. ಊಟದ ಮೆನು ಬದಲಾಯಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ವಾರ್ಡನ್ ಅವರದ್ದು, ಇಲ್ಲದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾವೀರ ಮ.ಕರೆಣ್ಣವರ ತಿಳಿಸಿದ್ದಾರೆ.
ಇದೇ ವೇಳೆ ನಗರದ ಶಾಮನೂರು ಗ್ರಾಮದ ಅಂಗನವಾಡಿ ಕೇಂದ್ರಗಳು ಹಾಗೂ ಜೆ.ಎಚ್ ಪಟೇಲ್ ಬಡಾವಣೆಯಲ್ಲಿನ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ವಾರ್ಡನ್‍ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.