ದಾವಣಗೆರೆ ರಿಂಗ್ ರೋಡ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಗಾಗಿ ಕೆಲವೆಡೆ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಆರಂಭಿಸಿದೆ. ಅದಕ್ಕಾಗಿ, ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶವೂ ಸೇರಿದಂತೆ ನಗರದಲ್ಲಿ ಶನಿವಾರ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಾಮಗಾರಿ ನಡೆಯುತ್ತಿರುವ ರಾಮಕೃಷ್ಣ ಹೆಗಡೆ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅದಕ್ಕಾಗಿ ಶನಿವಾರ ಬೆಳಗ್ಗೆ 5ಗಂಟೆಯಿಂದ ಭಾನುವಾರ ಸಂಜೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ದಾವಣಗೆರೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಆದೇಶಿಸಿದ್ದಾರೆ.
ರಾಮಕೃಷ್ಣ ಹೆಗಡೆ ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮನೆಗಳೇ ಹೆಚ್ಚಾಗಿದ್ದು, ಸುಮಾರು 419ಕ್ಕೂ ಹೆಚ್ಚು ಮನೆಗಳನ್ನು ತರವು ಮಾಡಲು ಉದ್ದೇಶಿಸಲಾಗಿದೆ. ಕಾರ್ಯಾಚರಣೆಗೆ ಅಲ್ಲಿನ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಶನಿವಾರ ಬೆಳಗ್ಗೆ ಏಕಾಏಕಿ ಜೆಸಿಬಿಗಳ ಮೂಲಕ ಮನೆಗಳನ್ನು ಕೆಡವಲಾಗುತ್ತಿದೆ. ಮನೆ ಕಳೆದುಕೊಳ್ಳುತ್ತಿರುವವರು ತಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಬಿಡದೆ, ಮನೆಗಳನ್ನು ಕೆಡವಲಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಪಾಇಕೆ ಆಯುಕ್ತ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.