ಉಚಿತ ಯೋಜನೆಗಳ ಜಾರಿ ಮಾಡುವುದಕ್ಕಿಂತ ದುಡಿಯಲು ಅವಕಾಶ ಸೃಷ್ಟಿಸಿ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಆದ್ಯತೆ ನೀಡಬೇಕೆಂದು ಸರ್ಕಾರಕ್ಕೆ ಹರಿಹರ ಶಾಸಕ ಬಿ.ಪಿ ಹರೀಶ್ ಹೇಳಿದರು.
ದಾವಣಗೆರೆ ಜಿಲ್ಲಾಡಳಿತ ಮತ್ತು ಹರಿಹರ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಹರಿಹರ ನಗರದ ಗುರುಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತು ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಉಚಿತ ಯೋಜನೆಗಳು, ಬಸವಣ್ಣನವರು ಕಾಯಕವೇ ಕೈಲಾಸ ತತ್ವಕ್ಕೆ ವಿರುದ್ಧವಾಗಿದೆ. ದುಡಿಮೆ ಮಾಡಿ ಬದುಕುವ ಅವಕಾಶ ಕಲ್ಪಿಸಿದರೆ ಅದು ಶಾಶ್ವತವಾಗಿ ಜನರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಪರಿಪೂರ್ಣವಾಗಿ ಜಾರಿ ಮಾಡುವಲ್ಲಿ ವಿಫಲವಾಗಿದೆ. ಹತ್ತಾರು ನಿಯಮಗಳನ್ನು ಪಾಲನೆ ಮಾಡುವ ಷರತ್ತು ಹಾಕಿರುವುದರಿಂದ ಗಣನೀಯ ಸಂಖ್ಯೆಯ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಲಾಭ ಸಿಕ್ಕಿಲ್ಲ ಎಂದು ಆರೋಪಿಸಿದರು.
ಪಂಚ ಯೋಜನೆಗಳಿಗಾಗಿ ಪ್ರತೀ ತಿಂಗಳು ತಾಲೂಕಿಗೆ ಸುಮಾರು 21ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆಯೆಂದ ಶಾಸಕರು, ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ, ವಿದ್ಯಾರ್ಥಿಗಳು, ನೌಕರರು, ಪುರುಷರಿಗೆ ಸಾರಿಗೆ ಸಂಸ್ಥೆ ಬಸ್ ಹತ್ತಲು ಸಹ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಬಸ್ ಸೌಲಭ್ಯ ಮಾಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಗುರುಬಸವರಾಜು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಬಡತನ ನಿರ್ಮೂಲನೆ ಮಾಡಿದೆ. ಎಲ್ಲಾ ವರ್ಗದ ಬಡವರ ಕಲ್ಯಾಣಕ್ಕೆ ದಾರಿದೀಪವಾಗಿವೆ ಎಂದರು.
ಹರಿಹರ ತಾಲೂಕಿನ 48,484 ಜನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒಟ್ಟು ರೂ.9.69 ಕೋಟಿ ಹಣ ಜಮೆ ಮಾಡಲಾಗಿದೆ. 62,303 ಗೃಹಜ್ಯೋತಿ ಫಲಾನುಭವಿಗಳಿಗೆ ರೂ.31.20 ಲಕ್ಷ ಹಣವನ್ನು ಬೆಸ್ಕಾಂಗೆ ನೀಡಲಾಗಿದೆ. 1.72 ಲಕ್ಷ ಯುನಿಟ್ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರೂ. 3.14ಕೋಟಿ ಜಮೆ ಮಾಡಿದೆ, 567 ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ರೂ.17 ಲಕ್ಷ ನೀಡಲಾಗಿದೆ. ಈವರೆಗೂ ಯೋಜನೆಗಳ ಲಾಭ ದೊರೆಯದಿದ್ದವರು ಸಂಬಂಧಿತ ಕಚೇರಿಗೆ ಸಂಪರ್ಕಿಸಬೇಕು ಎಂದು ಮಾಹಿತಿ ನೀಡಿದರು.
ಈ ವೇಳೆ ಸಿಡಿಪಿಒ ಪೂರ್ಣಿಮಾ, ಬೆಸ್ಕಾಂ ಎಇಇ ನಾಗರಾಜ ನಾಯ್ಕ, ಕೆಎಸ್‌ಆರ್‌ಟಿಸಿ ನಿರೀಕ್ಷಕ ವೀರಣ್ಣ, ಎಸಿಡಿಪಿಒ ರಾಘವೇಂದ್ರ, ಶಿವಕುಮಾರ್, ಕಂದಾಯ ಕೆ.ಟಿ. ಗೀತಾ, ಆಹಾರ ನಿರೀಕ್ಷಕ ಸಮಿರ್, ಗೀತಾ, ಲಕ್ಷ್ಮೀ ಹಾಗೂ ಯೋಜನೆಯ ಫಲಾನುಭವಿಗಳು ಹಾಜರಿದ್ದರು.