ಕಳೆದ ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂ ಸ್ವಾಧೀನಕ್ಕೆ ತಡೆ, ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ ,ಸಂವಿಧಾನ ಹಕ್ಕುಗಳ ಖಾತರಿ ,ಕೋಮುವಾದಿ ಕೃತ್ಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ, ರೈತರಿಗೆ ಬೆಂಬಲ ಬೆಲೆ ರಕ್ಷಣೆ ಮುಂತಾದ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಹಿಂದಿನ ಬಿಜೆಪಿ ಸರ್ಕಾರದ ನೀತಿಗಳನ್ನೇ ಮುಂದುವರೆಸುತ್ತಿರುವ ರಾಜ್ಯ ಸರ್ಕಾರ, ವಿದ್ಯುತ್ ಖಾಸಗೀಕರಣ ಸೇರಿದಂತೆ ಮೋದಿ ಸರ್ಕಾರದ ಜನ ವಿರೋಧಿ ಕಾರ್ಪೊರೇಟ್ ಪರವಾದ ಎಲ್ಲಾ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನ (ಮೇ 20) ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಪ್ರಶ್ನಿಸಿ ಜನಾಗ್ರಹ ಚಳವಳಿಯನ್ನು ಮಾಡುವ ಮೂಲಕ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜೆಸಿಟಿಯು ಕಾರ್ಯಕರ್ತರು ದಾವಣಗೆರೆಯ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಎಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ ಯುವಜನ ಸಂಘಟನೆಗಳ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದು ಹಿಂದಿನ ಬಿಜೆಪಿ ಸರ್ಕಾರದ ಕ್ರಮಗಳನ್ನೇ ಮುಂದುವರೆಸುತ್ತಿರುವ ಔಚಿತ್ಯವನ್ನು ಪ್ರಶ್ನಿಸಿ, ಜನಾಗ್ರಹ ನಿರ್ಣಯಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, “ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಸರಿಸುತ್ತಿದ್ದ ನೀತಿಗಳನ್ನೇ ಕಾಂಗ್ರೆಸ್ ಸರ್ಕಾರ ಕೂಡ ಮುಂದುವರೆಸುತ್ತಿದೆ. ಕಾರ್ಮಿಕರ ದುಡಿಮೆ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹಿಂದಿನ ಸರ್ಕಾರ ಏರಿಕೆ ಮಾಡಿದ್ದ ಕಾರ್ಮಿಕ ವಿರೋಧಿ ಕ್ರಮವನ್ನು ರದ್ದುಪಡಿಸುವ ಬದಲು ಏರಿಕೆಯನ್ನು ನೋಟಿಪಿಕೇಷನ್ ಮಾಡಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಲಕ್ಷಾಂತರ ಬಡ ದಲಿತ ಹಿಂದುಳಿದ ವರ್ಗಗಳ ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರ ಭೂಮಿ ಹಕ್ಕು ಕೋರಿರುವ ಅರ್ಜಿಗಳನ್ನು ಸಕ್ರಮ ಸಮಿತಿ ಮುಂದೆ ತರದೇ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಹಂತಗಳಲ್ಲೇ ಕಾನೂನುಬಾಹಿರವಾಗಿ ವಜಾಗೊಳಿಸಿ ರಾಜ್ಯದ ಎಲ್ಲ ಕಡೆ ನಿರ್ದಯವಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೂಲಕ ದೌರ್ಜನ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಮನಸೋ ಇಚ್ಚೆ ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಫಲವತ್ತಾದ ಕೃಷಿ ಭೂಮಿ ಯನ್ನು ಉಳಿಸಿಕೊಳ್ಳದೇ ಆಹಾರ ಭದ್ರತೆಗೆ ಗಂಭೀರ ಆಪಾಯ ತಂದೊಡ್ಡಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಕೇವಲ ಕೃಷಿ ಭೂಮಿ ಕಬಳಿಕೆಯ ದುರುದ್ದೇಶಕ್ಕಾಗಿ ಮಾತ್ರ ಮೇಲಿಂದ ಮೇಲೆ ಬಂಡವಾಳ ಹೂಡಿಕೆ ಸಮಾವೇಶಗಳನ್ನು ಏರ್ಪಡಿಸುತ್ತಿದೆ. ಈಗಾಗಲೇ ಕೆಐಎಡಿಬಿ ವಶದಲ್ಲಿರುವ ಲಕ್ಷಾಂತರ ಎಕರೆ ಭೂಮಿಯನ್ನು ಸಮರ್ಥವಾಗಿ ಬಳಸದೇ ಮತ್ತೇ ಮತ್ತೇ ಹೊಸ ಹೊಸ ಭೂ ಸ್ವಾಧೀನವನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿ ರಕ್ಷಣೆಗಾಗಿ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೃಷಿ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ದುರ್ಬಲ ಗೊಳಿಸಿ ಖಾಸಗಿ ಮಾರುಕಟ್ಟೆ ಗಳನ್ನು ಪ್ರೊತ್ಸಾಹಿಸಲಾಗುತ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಬೆಂಬಲ ಕಾಂಗ್ರೆಸ್ ಸರ್ಕಾರ ಕೂಡ ಬೆಂಬಲ ನೀಡುತ್ತಿದ್ದು, ಕೃಷಿ ಪಂಪಸೆಟ್ ಗಳಿಗೂ ಪ್ರೀ ಪೇಯ್ಡ್ ಮೀಟರ್ ಅಳವಡಿಕೆಯನ್ನು ಒತ್ತಾಯಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕಾರ್ಮಿಕ ವಿರೋಧಿ ಲೇಬರ್ ಕೋಡ್ ಗಳ ಜಾರಿಗೆ ಕ್ರಮ ವಹಿಸುತ್ತಿದ್ದು,ಯಾವುದೇ ಓಟಿ ಸೌಲಭ್ಯ ಇಲ್ಲದೇ ದಿನಕ್ಕೆ 12 ಗಂಟೆ ದುಡಿಸಿಕೊಳ್ಳಲು ಕಾರ್ಖಾನೆಗಳಿಗೆ ಅನುಮತಿ ನೀಡುತ್ತಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ನಾಗರಿಕ ಸೌಲಭ್ಯಗಳನ್ನು ಖಾಸಗೀಕರಿಸಲಾಗುತ್ತಿದ್ದು, ಹತ್ತು ತಿಂಗಳ ಅತಿಥಿ ಶಿಕ್ಷಕರ ನೇಮಕಾತಿಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವಂತೆ ಆದೇಶ ಹೊರಡಿಸಿದೆ. ದಲಿತರು, ಮಹಿಳೆಯರು, ಮಕ್ಕಳು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ವಿಫಲರಾಗಿರುವುದು ಮಾತ್ರವಲ್ಲ ಕೋಮುವಾದಿ ಹಾಗೂ ಮೂಲಭೂತವಾದಿ ಶಕ್ತಿಗಳ ಉಪಟಳಗಳನ್ನು ಹಿಮ್ಮೆಟ್ಟಿಸಲು ವಿಫಲವಾಗಿದೆ .ಅದೇ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಚಟುವಟಿಕೆಗಳ ಮೇಲೆ ಹೆಚ್ಚು ಹೆಚ್ಚು ನಿರ್ಬಂಧ ಏರಿಕೆ ಮಾಡಿ ಶಾಂತಿಯುತ ಪ್ರತಿಭಟನೆಗಳ ಮೇಲೂ ಕೂಡ ಕಠಿಣ ಕಾನೂನುಗಳನ್ನು ಅನ್ವಯಿಸಿ ಮೊಕದ್ದಮೆ ದಾಖಲಿಸಲಾಗುತ್ತಿದೆ. ಹೀಗೆ ಪ್ರತಿಯೊಂದು ವಲಯದಲ್ಲೂ ರಾಜ್ಯ ಸರ್ಕಾರದ ಜನ ವಿರೋಧಿ ಕ್ರಮಗಳನ್ನು ಕೈ ಬಿಡಬೇಕೆಂದು ಎಂದು ಸಂಯುಕ್ತ ಹೋರಾಟ ಕರ್ನಾಟಕ & ಜೆಸಿಟಿಯು ಒತ್ತಾಯಿಸುತ್ತದೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಅವ್ಯವಹಾರ, ತನಿಖೆಗೆ ಸಂಘದ ನಿರ್ದೇಶಕರ ಆಗ್ರಹ.
ಪ್ರತಿಭಟನೆಯಲ್ಲಿ ಆವರಗೆರೆ ಉಮೇಶ್, ಮಧು ತೊಗಲೇರಿ, ಮಂಜುನಾಥ್ ಕೈದಾಳೆ, ಆವರಗೆರೆ ಚಂದ್ರು, ಹೊನ್ನೂರು ಮುನಿಯಪ್ಪ, ಆನಂದರಾಜು, ಗುಮ್ಮನೂರು ಬಸವರಾಜ, ಮಂಜುನಾಥ್ ಕುಕ್ವಾಡ, ತಿಪ್ಪೇಸ್ವಾಮಿ, ಲಕ್ಷ್ಮಣ್, ಬುಳ್ಳಾಪುರ ಹನುಮಂತಪ್ಪ, ಐರಣಿ ಚಂದ್ರು, ಸತೀಶ್ ಅರವಿಂದ್. ಪವಿತ್ರ ಸತೀಶ್, ಗೌರಮ್ಮ, ನಾಗಮ್ಮ, ಕೆಂಚಮ್ಮ, ಪಾರ್ವತಮ್ಮ, ಮರುಳಸಿದ್ಧಮ್ಮ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.