ಮಣಿಪುರದ ಜನಾಂಗೀಯ ಗಲಭೆ,ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ರಾಷ್ಟ್ರಪತಿಗಳು ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ನೇತೃತ್ವದಲ್ಲಿ ವಕೀಲರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಕೀಲರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಮಣಿಪುರದಲ್ಲಿ ಕಳೆದ 82ದಿನಗಳಿಂದ ಜನಾಂಗೀಯ ಗಲಭೆ ನಡೆಯುತ್ತಿದೆ. 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 40 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳ ಹೆಗ್ಗಿಲ್ಲದೆ ನಡೆದಿವೆ. ಆದರೂ, ಪ್ರಧಾನಿ ಮೋದಿ ಆ ರಾಜ್ಯಕ್ಕೆ ಭೇಟಿ ನೀಡಿ, ಹಿಂಸಾಚಾರ ನಿಲ್ಲಿಸುವ ಪ್ರಯತ್ನ ಮಾಡಿಲ್ಲ” ಎಂದು ಕಿಡಿಕಾರಿದ್ದಾರೆ.
“ಇಂತಹ ಕೃತ್ಯಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯ ಖಂಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿಗಳ ಹೇಳಿಕೆ ಜನರ ಕಣ್ಣೂರೆಸುವ ತಂತ್ರವಾಗಿದೆಯೇ ಹೊರತು, ಹಿಂಸಾಚಾರಕ್ಕೆ ಅಂತ್ಯವಾಡುವ ಉದ್ದೇಶವಿಲ್ಲ. ಅಲ್ಲಿನ ಗಲಭೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. ಪ್ರಧಾನ ಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕೇಂದ್ರಸರ್ಕಾರಕ್ಕೆ ದೇಶದ ಜನತೆಯ ನೆಮ್ಮದಿಗಿಂತ ಚುನಾವಣೆಯೇ ತುಂಬಾ ಪ್ರಾಮುಖ್ಯವಾಗಿದೆ” ಎಂದು ಕಿಡಿಕಾರಿದರು.
“ಮಣಿಪುರದಲ್ಲಿ ನಡೆದಿರುವ ಜನಾಂಗೀಯ ಗಲಭೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರ ಹೊಣೆಯಾಗಿವೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ನಿರ್ಲಕ್ಷತನ ಮತ್ತು ತಪ್ಪಿಗೆ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ವಿರುದ್ಧ ರಾಷ್ಟ್ರಪತಿಗಳು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ಜಿಲ್ಲಾಧ್ಯಕ್ಷ ಅನೀಸ್ ಪಾಷ ,ಆಂಜನೇಯ ಗುರೂಜಿ, ಪ್ರಕಾಶ್ ಪಾಟೀಲ್, ಬೈರೇಶ್ವರ ಬಿ.ಎಂ., ಲೋಕಿಕೆರೆ ಪ್ರದೀಪ, ಹೆಚ್. ಎಂ.ನಾಯ್ಕ, ಸವಿತ.ಎಸ್. ಮಂಜುಳಾ, ನಾಗರಾಜ, ವಾಗೀಶ್ ಕಟಗಿಹಳ್ಳಿಮಠ, ಪ್ರಕಾಶ್ ಬಾತಿ, ಚಕ್ರವರ್ತಿ, ರುದ್ರೇಶ್, ಹನೀಫ್, ಗುರುಮೂರ್ತಿ, ಅಜಯ್, ಅಂಜಿನಪ್ಪ, ಶಿವರಾಜ್, ಕರಿಯಪ್ಪ, ಮಾಲತೇಶ್, ಪಾಪಣ್ಣ, ಮುಸ್ತಫಾ ಇತರರು ಇದ್ದರು.