ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಆದರೆ, ನಾನು ಅದನ್ನು ಗೆಲುವು ಎಂದು ಭಾವಿಸುವುದಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಜಿ.ಬಿ ವಿನಯ್ ಕುಮಾರ್ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2 ಪಕ್ಷಗಳು ಹಣದ ಹೊಳೆಯನ್ನು ಹರಿಸಿ ಮತಗಳನ್ನು ಖರೀದಿ ಮಾಡಿದ್ದಾರೆ. ನನಗೆ ಸಿಗಬೇಕಾದ ಟಿಕೆಟ್ ಅನ್ನು ತಪ್ಪಸಿದರು. ನಾನು ಪಕ್ಷೇತರನಾಗಿ ಚುನಾವಣೆಗೆ ನಿಂತಾಗ ನನ್ನ ಜೊತೆಗಿದ್ದ ಮುಖಂಡರನ್ನು ದುಡ್ಡುಕೊಟ್ಟು ಹಣಬಲ ತೋಳ್ಬಲದಿಂದ ಹೆದರಿಸಿ ಬೆಂಬಲಿಸದಂತೆ, ಮತ ಹಾಕದಂತೆ ನೋಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಪ್ರಜಾಪ್ರಭುತ್ವದ ಉಳಿವಿಗಾಗಿ, ಪಾಳೆಗಾರಿಕೆ ವಿರುದ್ಧ ಪಕ್ಷೇತರನಾಗಿ ನಾನು ಸ್ಪರ್ಧಿಸಿದ್ದೆ ನನಗೆ ಹಣ ಹಂಚದಿದ್ದರೂ 42 ಸಾವಿರಕ್ಕೂ ಹೆಚ್ಚು ಮತ ಬಂದಿದೆ. 1 ಲಕ್ಷ 50 ಸಾವಿರ ವೋಟ್ ಸಿಗುವ ನಿರೀಕ್ಷೆಯಲ್ಲಿದ್ದೆ. ಆದರೆ, ಕಡಿಮೆ ಬಂದಿದ್ದು ನನಗೆ ಅಚ್ಚರಿ ಜೊತೆ ನೋವು ತಂದಿದೆ. ಚುನಾವಣೆಯಲ್ಲಿ ಕತ್ತಲು, ರಾತ್ರಿ ಎಂಬುದು ಸಂಸ್ಕೃತಿಯಾಗಿ ಬೆಳೆದಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಈಗ ಸದ್ಯಕ್ಕೆ ರಾಜಕಾರಣದಲ್ಲಿ ಅನಾಥನಾಗಿದ್ದೇನೆ. ಆದರೆ ರಾಜಕಾರಣದಲ್ಲಿಯೇ ಮುಂದುವರೆಯುತ್ತೇನೆ . ನನ್ನ ಕನಸುಗಳು ಯಾವುದೇ ಕಾರಣಕ್ಕೂ ಕಮರುವುದಿಲ್ಲ. ಹೋರಾಟ ನಿಲ್ಲಿಸುವುದಿಲ್ಲ. ಮತ್ತೆ ಮತ್ತೆ ಬರುತ್ತೇನೆ.ಗೆಲ್ಲುತ್ತೇನೆ.ನಾನು ಹಠವಾದಿ ಜನರ ಸೇವೆ ಮಾಡುವುದು ನನ್ನ ಆಸೆ, ಅದಕ್ಕಾಗಿ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ.ಎಂ.ಪಿ ಆಗಲಿಲ್ಲ ಆದರೆ ಎಂಎಲ್ ಎ ಆಗುತ್ತೇನೆಂಬ ಭರವಸೆ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ನನ್ನ ಹೋರಾಟಕ್ಕೆ ತಾತ್ಕಲಿಕವಾಗಿ ಹಿನ್ನಡೆಯಾಗಿರಬಹುದು, ನಾನು ಎಲ್ಲಿಯೂ ಹೋಗದೆ ದಾವಣಗೆರೆಯಲ್ಲಿಯೆ ಐಎಎಸ್, ಕೆಎಎಸ್ ಕೊಚಿಂಗ್, ನವೋದಯ ಕೊಚಿಂಗ್ ಪ್ರಾರಂಭಿಸಲಿದ್ದೇನೆ. ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ದಾವಣಗೆರೆ ಉತ್ತರ, ದಕ್ಷಿಣ, ಹೊನ್ನಾಳಿ, ಹರಿಹರ `ಯಾವುದಾದರು ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಂಗಸ್ವಾಮಿ, ಐಯಣ್ಣ ಮತ್ತಿತರರು ಹಾಜರಿದ್ದರು.