ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ದಾವಣಗೆರೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿದ್ದ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದ ಜಗಳೂರು ತಾಲೂಕಿನ 1,100 ಮಂದಿ ರೈತರಿಗೆ ಹಣ ಪಾವತಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಆದೇಶಿಸಿದ್ದಾರೆ.
ಜಿಲ್ಲೆಯ ಜಗಳೂರು ಪಟ್ಟಣದ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದ ದಾವಣಗೆರೆ ತಾಲೂಕಿನ ರೈತರ ನಿಯೋಗ ಶಾಸಕ ಬಿ ದೇವೇಂದ್ರಪ್ಪ ನೇತೃತ್ವದಲ್ಲಿ ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಖರೀದಿ ಕೇಂದ್ರದಲ್ಲಿನ ಅವ್ಯವಹಾರದ ಬಗ್ಗೆ ದೂರು ಸಲ್ಲಿಸಿತ್ತು.
“ತಾಲೂಕಿನಲ್ಲಿ 2022-23ರಲ್ಲಿ 3000ಕ್ಕೂ ಅಧಿಕ ಮಂದಿ ರೈತರು ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದರು. ಈವರೆಗೂ ಅರ್ಹ ರೈತರಿಗೆ ಹಣ ಪಾವತಿಸದೆ ಸತಾಯಿಸಲಾಗುತ್ತಿದೆ” ಎಂದು ಆರೋಪಿಸಿದ್ದರು.
“ರೈತರ ಹೆಸರಿನಲ್ಲಿ ದಲ್ಲಾಳಿಗಳು ಮತ್ತು ರೈತರಲ್ಲದವರಿಗೆ ಹಣ ಪಾವತಿಸಿದ್ದು, ಅರ್ಹ ರೈತರಿಗೆ ಹಣ ನೀಡದೆ ವಂಚಿಸಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಶಾಸಕ ದೇವೇಂದ್ರಪ್ಪ ಸಚಿವರ ಗಮನಕ್ಕೆ ತಂದಿದ್ದರು.
ರೈತರ ನಿಯೋಗಕ್ಕೆ ಸ್ಪಂದಿಸಿದ ಸಚಿವರು, ಜಗಳೂರು ರಾಗಿ ಖರೀದಿ ಕೇಂದ್ರದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದರು. ಸಚಿವರ ಸೂಚನೆಯ ಮೇರೆಗೆ ಸರ್ಕಾರದ ಆಹಾರ ಸರಬರಾಜು ಇಲಾಖೆ ಅಧೀನ ಕಾರ್ಯದರ್ಶಿ ಎ. ಹನುಮಂತರಾಜು ಅವರು ಅರ್ಹ 1,100 ರೈತರಿಗೆ ಹಣ ಪಾವತಿಸಲು ಆದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ವಿದ್ಯುತ್ ತಂತಿ ಸ್ಪರ್ಶಿಸಿ ವೃದ್ಧೆ, ಹಸು ಸಾವು ಪ್ರಕರಣ; ಎಇಇ ಅಮಾನತು
“ಅವ್ಯವಹಾರಕ್ಕೆ ಕಾರಣರಾಗಿರುವ ಖರೀದಿ ಕೇಂದ್ರದ ಡಾಟಾ ಎಂಟ್ರಿ ಆಪರೇಟರ್ ಬಿಳಿಚೋಡು ಗಿರೀಶ್ ಮತ್ತು ಜೆ ಎಂ ನವೀನ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಹಾಗೂ ಖರೀದಿ ಕೇಂದ್ರದ ವ್ಯವಸ್ಥಾಪಕರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ತಡೆಹಿಡಿಯಬೇಕು” ಎಂದು ಆದೇಶಿಸಿದ್ದಾರೆ.
“ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದ 3,321 ರೈತರಿಗೆ ಡ್ರೈನ್ ವೋಚರ್‌ಗಳನ್ನು ನೀಡಿದ್ದು, 837 ಅರ್ಹ ರೈತರಿಗೆ ವೋಚರ್ ನೀಡಿಲ್ಲ. ನಿಜವಾದ ರೈತರ ಬದಲಿಗೆ ದಲ್ಲಾಳಿಗಳಿಗೆ ಹಾಗೂ ರಾಗಿ ಮಾರಾಟ ಮಾಡದ ರೈತರಿಗೆ ವೋಚರ್ ನೀಡಿರುವ ಅವ್ಯವಹಾರದ ಬಗ್ಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗುವುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.