ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಒತ್ತಾಯಿಸಿ ದಾವಣಗೆರೆ ನಗರದ ಜಯದೇವ ಸರ್ಕಲ್ ಬಳಿ ಇಂದು (ಜ.31) ಎಐಟಿಯುಸಿ ಸಂಯೋಜಿತ ಟೈಲರ್ಸ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ.
ಈ ವೇಳೆ ಮಾತನಾಡಿದ ಟೈಲರ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಆವರಗೆರೆ ಚಂದ್ರು, ರಾಜಕೀಯ ಅಧಿಕಾರಕ್ಕಾಗಿ ಕಿತ್ತಾಡುವುದನ್ನು ನಿಲ್ಲಿಸಿ ದುಡಿಯುವ ಜನರ ಹಿತ ಕಾಯುವಂತೆ ಸರ್ಕಾರಕ್ಕೆ ಮಾತಿನ ಮೂಲಕ ತಿವಿದ ಅವರು, ರಾಜ್ಯದಲ್ಲಿ ಸುಮಾರು 15 ಲಕ್ಷ ಜನ ಟೈಲರ್ ವೃತ್ತಿ ಮಾಡುತ್ತಿದ್ದು, ಅವರಿಗೆ ಕಲ್ಯಾಣ ಮಂಡಳಿ ಜಾರಿ ತರುವುದರ ಮೂಲಕ ಟೈಲರ್ ಕುಟುಂಬದವರ ಬದುಕಿಗೆ ಆಸರೆಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
2024ರ ಬಜೆಟ್‌ನಲ್ಲಿ ಟೈಲರ್ ಕಲ್ಯಾಣ ಮಂಡಳಿಯನ್ನು ಕೂಡಲೇ ಜಾರಿಗೆ ತರಬೇಕು ಎಂದರಲ್ಲದೆ , ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರುವ ಕುರಿತು ಶೀಘ್ರದಲ್ಲೇ ಟೈಲರ್ ಸಂಘಟನೆಯಿಂದ ನಿಯೋಗದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳು, ಕಾರ್ಮಿಕ ಮಂತ್ರಿಗಳು ಹಾಗೂ ಜವಳಿ ಖಾತೆ ಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮುಖಂಡರುಗಳಾದ ಯಶೋದಮ್ಮ, ಸ್ಮಿತಾ, ಮಂಜಣ್ಣ, ಶಾರದಮ್ಮ ಮಾತನಾಡಿದರು. ಪ್ರತಿಭಟನೆಯಲ್ಲಿ ನೇತ್ರಾವತಿ, ಗದಿಗೇಶ, ಅನಸೂಯ, ಪಂಕಜ್, ಶಕುಂತಲಾ, ಶಿಲ್ಪ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ಟೈಲರ್ ಸಂಘಟನೆಯ ಪ್ರತಿನಿಧಿಗಳು ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.