ವಿವಿಧ ಸ್ಲಂಗಳಲ್ಲಿ ವಾಸವಾಗಿರುವ ನಿವೇಶನ ರಹಿತ ನಿವಾಸಿಗಳಿಗೆ ಸರ್ಕಾರಿ ಭೂಮಿ ಗುರುತಿಸಿ, ನಿವೇಶನ ಮಂಜೂರು ಮಾಡಬೇಕು. ದಾವಣಗೆರೆ ನಗರದಲ್ಲಿ ಜಾಗ ಗುರುತಿಸಿ, ಆ ಜಾಗವನ್ನು ಸ್ಲಂ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಮುಖಂಡರು ದಾವಣಗೆರೆಯಲ್ಲಿ ಪತ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಾನಿರತ ಜಿ.ಹೆಚ್. ರೇಣುಕಾ ಯಲ್ಲಮ್ಮ, “ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸುಮಾರು 73 ವಿವಿಧ ಸ್ಲಂಗಳಲ್ಲಿ ಸುಮಾರು 3,000 ಬಡ ಕೂಲಿ ಕಾರ್ಮಿಕ ಕುಟುಂಬಗಳಿವೆ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ಜೀವಿಸುತ್ತಿದ್ದಾರೆ” ಎಂದು ತಿಳಿಸಿದರು.
ಕೋವಿಡ್-19 ಮಹಾಮಾರಿ ಆಕ್ರಮಿಸಿದ ನಂತರ ಸರಿಯಾಗಿ ದುಡಿಮೆಯೂ ಇಲ್ಲದಂತಾಗಿದೆ. ಬೆಲೆಗಳ ಏರಿಕೆಯಿಂದಾಗಿ ಮನೆ ಕಟ್ಟಿಕೊಂಡು ಜೀವಿಸಲು ತುಂಬಾ ತೊಂದರೆಯಾಗಿದೆ” ಎಂದರು.
“ಇಲ್ಲಿಯವರೆಗೆ ಒಬ್ಬ ಬಡ ಸ್ಲಂನಿವಾಸಿಗಳಿಗೂ ನಿವೇಶನ ಮಂಜೂರಾಗಿಲ್ಲ. ಈ ಹಿಂದಿನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರು ಭೂಮಿಯನ್ನು ಖರೀದಿಸಿ ಅದರಲ್ಲಿ ನಿವೇಶನ ರಹಿತ ಸ್ಲಂ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ, ಆ ಭೂಮಿಯಲ್ಲಿ ಇದುವರೆಗೂ ಯಾರಿಗೂ ನಿವೇಶನ ಹಂಚಿಕೆ ಮಾಡಲಾಗಿಲ್ಲ” ಎಂದರು.
“ನಿಜವಾದ ನಿವೇಶನ ರಹಿತರಿಗೆ ಭೂಮಿ ಗುರುತಿಸಿ, ನಿಜವಾದ ಫಲಾನುಭವಿಗಳಿಗೆ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಬ್ಬಿರ್ ಸಾಬ್, ಮಂಜುಳಾ, ಜಂಶಿದಾ ಬಾನು, ಬಾಲಪ್ಪ, ಆನಂದಪ್ಪ, ಸಾವಿತ್ರಮ್ಮ, ರೇಷ್ಮಾ ಬಾನು, ರೇಖಾ, ಅಸ್ಮಾಬಾನು, ರಾಜೇಶ್ವರಿ, ಸಲಾಬಾನ, ಸಿಕಂದರ್ ಮತ್ತಿತರರಿದ್ದರು.