ದೆಹಲಿ ಚಲೋ ಪ್ರತಿಭಟನೆಗಾಗಿ ದೆಹಲಿಗೆ ಹೊರಟಿದ್ದ ರೈತರ ಮೇಲೆ ಕೇಂದ್ರ ಮತ್ತು ಹರಿಯಾಣ ಬಿಜೆಪಿ ಸರ್ಕಾರ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದಾರೆ.
ದಾವಣಗೆರೆ ಜಿಲ್ಲೆಯ ಆನಗೋಡು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡ ಉಮೇಶ್ ಆವರಗೆರೆ, “ಬಹಳ ಹಿಂದೆಯೇ ರೈತರ ಉತ್ಪನ್ನಗಳಿಗೆ ಎಂ.ಎಸ್ ಸ್ವಾಮಿನಾಥನ್ ಶಿಫಾರಸ್ಸಿನ ಸೂತ್ರದಂತೆ ಸಿ2+50% ಪ್ರಕಾರ ಎಂಎಸ್‌ಪಿಯನ್ನು ಶಾಸನಬದ್ದವಾಗಿ ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುಚ್ಚಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದರು.
“ರಾಷ್ಟ್ರೀಯ ಕನಿಷ್ಠ ವೇತನ ಮಾಸಿಕ 26,000 ರೂಗಳಿಗೆ ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು” ಎಂದರು.
4 ಕಾರ್ಮಿಕ ಸಂಹಿತೆಗಳನ್ನು,ಎಫ್ ಟಿಐ ಪದ್ಧತಿಯನ್ನು ಹಾಗೂ ಕೆಲಸದ ಅವಧಿಯ ಹೆಚ್ಚಳವನ್ನು ರದ್ದುಪಡಿಸಬೇಕು. ಅರಣ್ಯ ಹಕ್ಕು ಕಾಯ್ದೆ 2006ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರ್ಪೋರೇಟ್ ಸ್ನೇಹಿ ರೈತ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2023 ಹಾಗೂ ಜೀವ ವೈವಿಧ್ಯ ಕಾಯ್ದೆಯನ್ನು ರದ್ದುಪಡಿಸಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕು ಖಾತ್ರಿಪಡಿಸಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಿ ಪರಿಹಾರ ಕ್ರಮ ವೈಜ್ಞಾನಿಕ. ರೈತ ಸ್ನೇಹಿಯಾಗಿರಬೇಕು. ಬಗರ್ ಹುಕ್ಕುಂ ಸಾಗುವಳಿದಾರರು ಸೇರಿದಂತೆ ಎಲ್ಲಾ ಉಳುಮ ರೈತರಿಗೆ ಭೂಮಿ ಹಕ್ಕು ಖಾತರಿಪಡಿಸಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೊನ್ನೂರು ಮುನಿಯಪ್ಪ, ವರದರಾಜ, ಮಧು ತೊಗಲೇರಿ, ಭೀಮಪ್ಪ, ಐರಣಿ ಚಂದ್ರು, ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.