ಮೂಲಸೌಲಭ್ಯ ಕೊರತೆಯಿಂದ ಮುಚ್ಚುವ ಆತಂಕ ಎದುರಿಸುತ್ತಿರುವ ದಾವಣಗೆರೆ ಉತ್ತರ ಶಿಕ್ಷಣ ವಲಯದ ನರಸೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ (ಎಐಡಿಎಸ್‌ಓ)ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಮನವಿ ಸಲ್ಲಿಸಿ ಮಾತನಾಡಿದ ದಾವಣಗೆರೆ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ, “ಇಂದು ದಾವಣಗೆರೆಯ ಉತ್ತರ ವಲಯದ ನರಸೀಪುರ ಗ್ರಾಮದಲ್ಲಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ಮೂಲಕ ಸಾರ್ವಜನಿಕ ಶಿಕ್ಷಣ ಉಳಿಸಿ-ಹಳ್ಳಿ ಮಟ್ಟದ ಸಮಾವೇಶದ ಮೂಲಕ ಊರಿನ ಸರ್ಕಾರಿ ಶಾಲೆಯ ಪರಿಸ್ಥಿತಿ ಕುರಿತು ಅಧಿಕಾರಿಗಳ ಗಮನ ಸೆಳೆಯುತ್ತಿದ್ದೇವೆ. ನರಸಿಪುರ ಗ್ರಾಮದ ಸ.ಕಿ.ಪ್ರಾ ಶಾಲೆಯು ತುಂಬ ಚಿಕ್ಕದಾಗಿದ್ದು ಮೂಲಭೂತ ಸೌಕರ್ಯಗಳಿಲ್ಲದೇ ಬಳಲುತ್ತಿದೆ. ಮಕ್ಕಳಿಗೆ ಆಡಲು ಮೈದಾನವಿಲ್ಲ, ಶೌಚಾಲಯ ಕಳಪೆಯಾಗಿದೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕಾದ ಸರ್ಕಾರಿ ಶಾಲೆಯು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಇಂಥಹ ವ್ಯವಸ್ಥೆಯಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಶಾಲೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಬೇಡಿಕೆಗಳಾದ ಮಕ್ಕಳಿಗೆ ಆಡಲು ಮೈದಾನ, ಶುಚಿಯಾದ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಮಕ್ಕಳ ಬೆಳವಣಿಗೆಯನ್ನು ವೃದ್ಧಿಸಲು ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಒದಗಿಸಬೇಕೆಂದು ಎಐಡಿಎಸ್‌ಓ ಜಿಲ್ಲಾ ಸಮಿತಿ ಹಾಗೂ ನರಸೀಪುರದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ. ಶಾಲೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಜರೂರಾಗಿ ಶಾಲೆಯ ಅಗತ್ಯ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸುತ್ತೇವೆ” ಎಂದರು.

ಮನವಿ ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶೇರ್ ಅಲಿ ಮಾತನಾಡಿ “ಶಾಲೆಯ ಸಮಸ್ಯೆ ಕುರಿತು ಗಮನ ಸೆಳೆವ ಉತ್ತಮ ಕೆಲಸ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಮಾಡುತ್ತಿದೆ. ಇದು ಶ್ಲಾಘನೀಯ. ಶಾಲೆಗೆ ತ್ವರಿತಗತಿಯಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಹಾಗೂ ಮೈದಾನಕ್ಕೆ ಸಂಬಂದಿಸಿದಂತೆ ಹಕ್ಕುಪತ್ರಗಳನ್ನು ಪರಿಶೀಲಿಸಿ ಕಂದಾಯ ಇಲಾಖೆಯ ಜೊತೆಗೆ ಮಾತನಾಡಿ ಕ್ರಮಕೈಗೊಳ್ಳುತ್ತೇವೆ ಮತ್ತು ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ” ಎಂದು ಆಶ್ವಾಸನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಟ ಅಹಿಂಸಾ ಚೇತನ್ ರ ಸಮಾನತೆಯ ಸಭೆ, ಪಾಲ್ಗೊಳ್ಳಲು ಸಮಾನ ಮನಸ್ಕರಿಗೆ ಆಹ್ವಾನ.
ಎಐಡಿಎಸ್‌ಓ ಸಂಘಟನೆಯ ಅಭಿಷೇಕ್, ಶ್ರೀನಿವಾಸ್, ಗಂಗಾಧರ್, ಸಂಗೀತ, ದಿವ್ಯಾ, ನರಸೀಪುರ ಶಾಲೆ ಉಳಿಸಿ ಹೋರಾಟ ಸಮಿತಿ ಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.