ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತೀಶ್ ಪೂಜಾರಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ದಾವಣಗೆರೆ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಸದ್ಯ ಆರೋಪಿಯನ್ನು ದಾವಣಗೆರೆಗೆ ಕರೆತಂದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ವರದಿಯಾಗಿದೆ.
ದಾವಣಗೆರೆಯಲ್ಲಿ ಗುರುವಾರ ಬೇತೂರು ರಸ್ತೆಯ ವೆಂಕಾಭೋವಿ ಕಾಲೋನಿಯ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟಕ್ಕೆ ಪ್ರಚೋದನಾತ್ಮಕ ಹೇಳಿಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.
ನಾಗಮಂಗಲದ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆ ವಿರೋಧಿಸಿ ಬುಧವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ಪೂಜಾರಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದ್ವೇಷ ಭಾಷಣ ಮಾಡಿದ್ದರಿಂದ ಕಳೆದ ಗುರುವಾರ ದಾವಣಗೆರೆಯ ವೆಂಕಾಭೋವಿ ಕಾಲೋನಿಯ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ನಡೆದಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಡೆದ ಗಲಾಟೆ ಬಳಿಕ ಸತೀಶ್ ಪೂಜಾರಿ ನಾಪತ್ತೆಯಾಗಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಸಂಬಂಧಿಯಿಂದಲೇ ಮಹಿಳೆಯ ಮೇಲೆ ಅತ್ಯಾಚಾರ: ಪ್ರಕರಣ ತಡವಾಗಿ ಬೆಳಕಿಗೆ
ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಸೆಪ್ಟಂಬರ್ 19ರಂದು ದಾವಣಗೆರೆ ನಗರದ ಅರಳಿಮರ ಸರ್ಕಲ್ ದಾಟಿ ಚಾಮರಾಜಪೇಟೆ ಸರ್ಕಲ್ ಬಳಿ ಹೋಗುವಾಗ ಕಲ್ಲು ತೂರಾಟ ನಡೆದಿತ್ತು. ಈ ಪ್ರಕರಣ ಸಂಬಂಧ ಈವರೆಗೆ ಒಟ್ಟು 6 ಪ್ರಕರಣ ದಾಖಲಿಸಲಾಗಿದೆ. ಈವರೆಗೆ 48 ಜನರನ್ನು ಬಂಧಿಸಲಾಗಿದೆ.
