ಸುಂದರ ಬದುಕಿಗೆ ಸಾಮಾಜಿಕ ಮೌಲ್ಯಗಳು ಭದ್ರಬುನಾದಿ ಇದ್ದ ಹಾಗೆ. ಮೌಲ್ಯಗಳಿಲ್ಲದ ಬದುಕು ದೇವರಿಲ್ಲದ ಗುಡಿಯಂತೆ ಎಂದು ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯಪ್ಪ ಅಭಿಪ್ರಾಯಪಟ್ಟರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ, ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಮ್.ಬಿ. ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ʼಬದುಕು ಮತ್ತು ಸಾಮಾಜಿಕ ಮೌಲ್ಯಗಳʼ ಕುರಿತು ಅವರು ಮಾತನಾಡಿದರು.
ನಮ್ಮ ಕನ್ನಡದ ಹಳೆಗನ್ನಡ ಸಾಹಿತ್ಯ ನಡುಗನ್ನಡ ಸಾಹಿತ್ಯ ಹೊಸಗನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ವಚನ ಸಾಹಿತ್ಯ ಜನಪದ ಸಾಹಿತ್ಯದಲ್ಲಿ ಬೇಕಾದಷ್ಟು ಮೌಲ್ಯಗಳು ತುಂಬಿವೆ. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಹಲವಾರು ನಿದರ್ಶನಗಳ ಮೂಲಕ ವಿವರಿಸಿದರು.
ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದು ಅಭಿಪ್ರಾಯಪಟ್ಟ ಅವರು, ಮೌಲ್ಯಗಳು ಕಣ್ಣಿಗೆ ಕಾಣುವಂಥವುಗಳಲ್ಲ ಆಚರಣೆಯಲ್ಲಿ, ನಡವಳಿಕೆಯಲ್ಲಿ ತೋರ್ಪಡಿಸುವಂಥವುಗಳು ಎಂದರು.
ಮೌಲ್ಯಗಳ ಬೋಧನೆಯ ವಸ್ತುಗಳನ್ನು ನಮ್ಮ ನಡೆನುಡಿಯಲ್ಲಿ ಅಳವಡಿಸಿಕೊಳ್ಳುವಂಥವಾಗಿವೆ. ನಾವೆಲ್ಲ ಸಾಮಾಜಿಕ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸ್ವಾಸ್ಥ ಸಮಾಜವನ್ನು ಕಟ್ಟುವಲ್ಲಿ ನಮ್ಮದೇ ಆದ ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ತಾಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಸ್ತಾವಿಕ ನುಡಿಗಳನ್ನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯಗಳ ಪರಿಚಯ ಮಾಡುವಂತಹ ಕೆಲಸ ಸಾಹಿತ್ಯ ಪರಿಷತ್ ಮಾಡುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಎಸ್.ಎಸ್.ಎಮ್.ಬಿ. ಶಿಕ್ಷಣ ವಿದ್ಯಾಲಯ ಪ್ರಾಚಾರ್ಯರಾದ ಡಾ.ಪ್ರೇಮ ಪಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ನಿರ್ದೇಶಕಿ ರೇಖಾ ಓಂಕಾರಪ್ಪ, ಮಮತಾ ರುದ್ರಮನಿ ಹಾಗೂ ಎಂ.ಬಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಚಂದ್ರಿಕಾ ಮತ್ತು ಅಕ್ಷತಾ ಪ್ರಾರ್ಥಿಸಿದರು. ಯಶಸ್ವಿನಿ ಸ್ವಾಗತಿಸಿದರು. ರಹೀಲಾ ವಂದಿಸಿದರು. ಮೋಕ್ಷ ನಿರೂಪಿಸಿದರು.
