ಆಡಳಿತ, ಅಧಿಕಾರ, ಆಸ್ತಿ, ಅವಕಾಶಗಳು ಕೇವಲ ದಾವಣಗೆರೆ ಜಿಲ್ಲೆ ಎರಡೇ ಕುಟುಂಬಗಳ ಹಿಡಿತದಲ್ಲಿದ್ದು, ಜನರ ಮನದಲ್ಲಿ ಕೋಪವಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡು ಕುಟುಂಬಗಳ ವಿರುದ್ಧದ ಅಸಮಾಧಾನ, ಕೋಪ, ಬೂದಿ ಮುಚ್ಚಿದ ಕೆಂಡ ಸ್ಫೋಟ ಆಗಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ನನ್ನ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಅಚ್ಚರಿ ಫಲಿತಾಂಶ ಹೊರ ಬೀಳಲಿದೆ ಎಂದು ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಭವಿಷ್ಯ ನುಡಿದರು.
ದಾವಣಗೆರೆಯಲ್ಲಿ ತಮ್ಮ ಗೃಹಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ ಬಳಿಕವೂ ಒತ್ತಡ ಬರುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ, ಸ್ಪರ್ಧೆ ಖಚಿತ ಎಂದು ಪುನರುಚ್ಚರಿಸಿದರು.
ದಾವಣಗೆರೆ ರಾಜಕಾರಣದಲ್ಲಿ ಹೊಸಬರಿಗೆ ಅವಕಾಶವೇ ಇಲ್ಲ ಎಂಬಂಥ ವಾತಾವರಣ ನಿರ್ಮಾಣ ಆಗಿದೆ. ನನಗೆ ಟಿಕೆಟ್ ಸಿಗಲಿಲ್ಲ ಎಂದು ಸುಮ್ಮನೆ ಮನೆಯಲ್ಲಿ ಕುಳಿತರೆ ಏನೂ ಆಗದು ಎಂಬುದು ನನಗೆ ಗೊತ್ತು. ಜನಬೆಂಬಲ ಇಲ್ಲದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವ ನಿರ್ಧಾರ ಮಾಡುತ್ತಿರಲಿಲ್ಲ. ಪಕ್ಷಾತೀತವಾಗಿ ಎಲ್ಲಾ ವರ್ಗದವರು ನನ್ನನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ಎರಡು ಕುಟುಂಬಗಳ ಸಾಮ್ರಾಜ್ಯಶಾಹಿ, ವಂಶಾಡಳಿತ ರಾಜಕಾರಣಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಕೆಲವೇ ಕುಟುಂಬಗಳ ಬಂಡವಾಳಶಾಯಿ ಸಾಮ್ರಾಜ್ಯ ನಿರ್ಮಾಣವಾಗಿದೆ. ರಾಜಕಾರಣ ಕೇವಲ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಡಾ. ಜಿ.ಎಂ. ಸಿದ್ದೇಶ್ವರರ ಕುಟುಂಬಗಳ ಸ್ವತ್ತು ಎಂಬಂತಾಗಿದೆ. ಎಲ್ಲಾ ಅವಕಾಶಗಳು ಈ ಕುಟುಂಬದ ಹಿಡಿತದಲ್ಲಿವೆ. ಆಸ್ತಿ, ಅಧಿಕಾರ, ಅವಕಾಶಗಳನ್ನು ತಾವೇ ಇಟ್ಟುಕೊಂಡಿದ್ದು, ಉಳಿದ ಕೆಲವರಿಗಷ್ಟೇ ನೀಡಲಾಗುತ್ತಿದೆ. 30ರಿಂದ 40 ವರ್ಷ ರಾಜಕಾರಣ ಮಾಡಿದವರು ಜನಸೇವೆಗಿಂತ ಹೆಚ್ಚು ಹಲವಾರು ಉದ್ದಿಮೆಗಳು, ಅಧಿಕಾರ ಅನುಭವಿಸಿರುವ ಈ ಕುಟುಂಬದ ಸದಸ್ಯರೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ ಎಂದು ಆರೋಪಿಸಿದ ಅವರು ರಾಜಕಾರಣದಲ್ಲಿ ಜನಸೇವೆ ಪ್ರಮುಖವಾಗಬೇಕು. ಆದ್ರೆ, ಇಲ್ಲಿ ಜನಸೇವೆ ಕೊನೆ ಆದ್ಯತೆ ಆಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಪಕ್ಷದ, ಅಭ್ಯರ್ಥಿಯ ವಿರುದ್ಧ ರೆಬೆಲ್ ಆಗಿಲ್ಲ. ನನ್ನ ಜೊತೆ ಮುಖಂಡರು ಬಹಿರಂಗವಾಗಿ ಗುರುತಿಸಿಕೊಳ್ಳದೇ ಇರಬಹುದು. ಪರೋಕ್ಷವಾಗಿ ಸಹಕರಿಸುತ್ತಾರೆ. ಕಾರ್ಯಕರ್ತರೂ ಕೂಡ ನನ್ನ ಪರವಾಗಿದ್ದಾರೆ. ಒಳಗೊಳಗೆ ಎರಡೂ ಪಕ್ಷಗಳಲ್ಲಿಯೂ ಅಸಮಾಧಾನ ಇದೆ. ಕಾಂಗ್ರೆಸ್ ಪಕ್ಷದಲ್ಲಿಯೂ ಇದೆ. ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ, ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ, ಜನಸೇವೆಗಾಗಿ ಬಂದಿದ್ದೇನೆ. ಆಸ್ತಿ ಸಂಪಾದಿಸಲು, ಅಧಿಕಾರ ಚಲಾಯಿಸಲು ಬಂದಿಲ್ಲ. ಸೇವೆಗೊಂದು ಅವಕಾಶ ಕೊಡಿ ಎಂಬುದಷ್ಟೇ ನನ್ನ ಪ್ರಾರ್ಥನೆ ಎಂದು ಮತದಾರರಲ್ಲಿ ಮನವಿ ಮಾಡಿದರು.