ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಮಾರಾಟಕ್ಕಾಗಿ ಕೊಯ್ದು ಇಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ಟೊಮೆಟೊ ನೀರಿನಲ್ಲಿ ಕೊಚ್ಚಿ ಹೋಗಿವೆ.
ಆರುಂಡಿ ಮಂಗಳವಾರ ತಡ ರಾತ್ರಿ ಭಾರೀ ಮಳೆಯಾಗಿದೆ. ಇಡೀ ಗ್ರಾಮವೇ ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಜವಳಿ ಸುರೇಶ್ ಎಂಬುವರು ಟೊಮೆಟೊ ಬೆಳೆದಿದ್ದರು. ಮಾರಾಟಕ್ಕಾಗಿ ಟೊಮೆಟೊವನ್ನು ಕೊಯ್ದು ಇಟ್ಟಿದ್ದರು. ಆ ಟೊಮೆಟೊ ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಮಾರು 25,000 ರೂ.ಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗಿದೆ.
ಜಮೀನಿನಲ್ಲಿ ಟೊಮೆಟೊವನ್ನು ಬಾಕ್ಸ್ಗೆ ತುಂಬುತ್ತಿದ್ದಾಗ ಭಾರಿ ಮಳೆಯಾಗಿದ್ದರಿಂದ, ಟೊಮೆಟೊವನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ಟೊಮೆಟೊ ಕೊಚ್ಚಿ ಹೋಗಿವೆ. ರೈತ ಸುರೇಶ್ ನಷ್ಟಕ್ಕೆ ಸಿಲುಕಿದ್ದು, ಕಂಗಾಲಾಗಿದ್ದಾರೆ.