ಇದು ದಾವಣಗೆರೆ ನಗರದ ಹೊರವಲಯದಲ್ಲಿರುವ ಸುಮಾರು 70 ವರ್ಷ ಇತಿಹಾಸ ಇರುವ ಶಾಲೆ. ಅಭಿವೃದ್ಧಿ ಕಾಣದೆ ಹಲವು ವರ್ಷಗಳೇ ಕಳೆದು ಹೋಗಿವೆ. ಶೌಚಾಲಯಗಳ ದುಸ್ಥಿತಿ ಹೇಳತೀರದು. ಅಂಗಳದ ಕಾಂಪೌಂಡಿಗೆ ಹೊಂದಿಕೊಂಡಂತೆ ಹುಲ್ಲುಕಡ್ಡಿಗಳು ಗಿಡಮರಗಳು ಬೆಳೆದುಕೊಂಡಿದೆ. ಅವುಗಳಲ್ಲಿ ಆಗಾಗ್ಗೆ ಕ್ರಿಮಿಕೀಟಗಳು ಕಂಡದ್ದುಂಟು. ಈ ಶಾಲೆಯಲ್ಲಿ ಇರೋದೆ ಮೂರು ಕೋಣೆಗಳು. ಅವುಗಳಲ್ಲಿ ಈಗ ಒಂದರ ಚಾವಣಿ ಬಿದ್ದು ಹೋಗಿದೆ. ಉಳಿದಿರುವ ಎರಡು ಕೋಣೆಗಳಲ್ಲಿ ಒಂದು ಕೋಣೆ ಅಡಿಗೆಗೆ ಮೀಸಲಾಗಿ ಬಳಸಿಕೊಂಡರೆ. ಒಂದು ಕೊಠಡಿಯಲ್ಲಿ ಶಾಲೆ ನಡೆಯುತ್ತಿದೆ.
ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ನಡೆಯುವ ದಾವಣಗೆರೆ ನಗರದ ಹೊರವಲಯದ ದೊಡ್ಡಬೂದಾಳಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಳೆದ ವರ್ಷ 50ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಆದರೆ, ಈ ಬಾರಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ 30ಕ್ಕೆ ಇಳಿಕೆ ಕಂಡಿದೆ. ಅದಕ್ಕೆ ಕಾರಣ ಮೂಲಭೂತ ಸೌಕರ್ಯಗಳ ಕೊರತೆ.
ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ವಿದ್ಯಾರ್ಥಿಗಳಿದ್ದು, ಈ ಎಲ್ಲಾ ವಿದ್ಯಾರ್ಥಿಗಳು ಈಗ ಉಳಿದಿರುವ ಒಂದೇ ಕೊಣೆಯಲ್ಲಿ ಪಾಠ ಕಲಿಯುತ್ತಿದ್ದಾರೆ ಎಂದರೆ ಅಲ್ಲಿರುವ ವ್ಯವಸ್ಥೆಯನ್ನು ನೀವು ಊಹಿಸಬಹುದು. ಆ ಕೋಣೆಯೂ ಕೂಡ ಮೂರ್ನಾಲ್ಕು ಕಡೆ ಸಿಮೆಂಟ್ ಶೀಟ್‌ಗಳಲ್ಲಿ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಸೋರುತ್ತಿದೆ. ವಿದ್ಯಾರ್ಥಿಗಳು ಆ ಕೊಠಡಿಯಲ್ಲಿಯೇ ಪಾಠ ಕಲಿಯುವ ಪರಿಸ್ಥಿತಿ ಬಂದೊದಗಿದೆ.

ಶಾಲೆಯ ಆವರಣದಲ್ಲಿ ಗೋಡೆಗೆ ತಾಗಿಕೊಂಡಂತೆ ಗಿಡಗಂಟೆಗಳು ಹುಲ್ಲು ಬೆಳೆದಿದ್ದು, ಶಾಲೆಯ ಹಿಂದೆ ಕೂಡ ಗಿಡ ಗಂಟೆಗಳು ಬೆಳೆದಿದ್ದು, ಹಾವು ಹಾಗೂ ಇತರ ಕ್ರಿಮಿಕೀಟಗಳು ಕೂಡ ಇದ್ದು, ಮಕ್ಕಳು ಓಡಾಡುವುದಕ್ಕೆ ಆತಂಕಪಡುತ್ತಿದ್ದಾರೆ.
ಶಾಲೆಯ ಈ ದುಸ್ಥಿತಿಯ ಬಗ್ಗೆ ವರದಿ ಮಾಡಲು ಈ ದಿನ.ಕಾಮ್ ಸ್ಥಳಕ್ಕೆ ತೆರಳಿದಾಗ, ಆಗಸ್ಟ್ 16ರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಯ ಮೇಲ್ಛಾವಣಿಯ ಹಂಚು ಮತ್ತು ಮರದ ತುಂಡುಗಳು ಕುಸಿದು ಬಿದ್ದಿದ್ದು, ಗೋಡೆಗಳು ಸಂಪೂರ್ಣವಾಗಿ ಬೀಳುವ ಹಂತದಲ್ಲಿರುವುದು ಕಂಡು ಬಂದಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ಈ ಕೊಠಡಿಯಲ್ಲಿ ಜೂನ್ ಅಂತ್ಯದವರೆಗೂ ಮಕ್ಕಳಿಗೆ ಶಾಲಾ ತರಗತಿಗಳು ನಡೆದಿದ್ದು, ಅಪಾಯವನ್ನು ಊಹಿಸಿ ಜುಲೈನಿಂದ ಮಕ್ಕಳಿಗೆ ಈ ಕೊಠಡಿಯಲ್ಲಿ ಪಾಠ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಅಪಾಯ ತಪ್ಪಿದೆ. ಶಾಲೆಯ ಮಕ್ಕಳಿಗೆ ಪಾಠ ಮಾಡುವುದನ್ನು ಸ್ಥಗಿತಗೊಳಿಸಿದ ಬಳಿಕ ಎಸ್ಡಿಎಂಸಿ ಸಭೆ ಮತ್ತು ಇನ್ನಿತರ ಉದ್ದೇಶಗಳಿಗೆ ಕೊಠಡಿಯನ್ನು ಬಳಸಿಕೊಳ್ಳಲಾಗುತ್ತಿತ್ತು.
ಶಿಥಿಲಗೊಂಡು ಮೇಲ್ಛಾವಣಿ ಕುಸಿದಿರುವ ಕೊಠಡಿಯಲ್ಲಿ ಕಪ್ಪು ಹಲಗೆಯ ಮೇಲೆ ಬರೆದಿದ್ದ ಮಾಹಿತಿ ಪ್ರಕಾರ ಎಸ್ಡಿಎಂಸಿ ಸಭೆಯನ್ನು 28 ಜುಲೈ 2024ರಂದು ನಡೆಸಿ ಅದರ ವಿವರವನ್ನು ಹಲಗೆಯ ಮೇಲೆ ಬರೆಯಲಾಗಿದೆ. ಹೀಗೆ ಅನ್ಯ ಉದ್ದೇಶಗಳಿಗೆ ಬಳಸುತ್ತಿದ್ದ ಕೋಣೆಯ ಛಾವಣಿ ಇಂದು(ಆಗಸ್ಟ್ 16) ಏಕಾಏಕಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಆ ಸಮಯದಲ್ಲಿ ಮಕ್ಕಳು ಅಥವಾ ಇತರೆ ಯಾರೂ ಅಲ್ಲಿ ಇಲ್ಲದ ಕಾರಣ ಅಪಾಯವೊಂದು ತಪ್ಪಿದೆ. ಆದರೂ ಗೋಡೆಗಳು ಮತ್ತು ಚಾವಣಿ ಕುಸಿವ ಹಂತದಲ್ಲಿದ್ದು, ಯಾವುದೇ ಸಮಯದಲ್ಲಾದರೂ ಬೀಳುವ ಹಂತದಲ್ಲಿದೆ.
ಮಾಹಿತಿಗಳ ಪ್ರಕಾರ, ಈ ವಿಷಯವು ಶಿಕ್ಷಣ ಇಲಾಖೆಗೆ ಮೂರ್ನಾಲ್ಕು ವರ್ಷಗಳಿಂದಲೇ ಗೊತ್ತಿದೆ. ಈ ಶಾಲೆಗೆ ಸುಮಾರು 13.50 ಲಕ್ಷ ರೂಪಾಯಿ ಕೊಠಡಿ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದು, ಅದು ಜಿಲ್ಲಾ ಪಂಚಾಯತಿಯ ಅನುಮೋದನೆ ಹಂತದಲ್ಲಿದೆ. ಹೀಗೆ ಎರಡು ವರ್ಷಗಳಿಂದಲೂ ಕೂಡ ಅದೇ ಹಂತದಲ್ಲಿದ್ದು ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಹಳೆಯ ಕಟ್ಟಡವನ್ನು ಕೆಡವಿ ಹೊಸಕಟ್ಟಡ ನಿರ್ಮಿಸುವ ಕಾರ್ಯ ಸಾಧ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಈ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಕರಿಬಸಪ್ಪ, “ನಾನು ಇದೇ ಶಾಲೆಯಲ್ಲಿ ಓದಿದ್ದು. ಈ ಶಾಲೆಗೆ ಒಂದು ಕೊಠಡಿಯ ನಿರ್ಮಾಣಕ್ಕೆ ಎರಡು ವರ್ಷಗಳ ಹಿನ್ನೆಲೆ ಅನುದಾನ ದೊರೆತಿದ್ದು, ಅಧಿಕಾರಿಗಳ ಮತ್ತು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಕೊಠಡಿಯ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಹೆದರುತ್ತಿದ್ದು, ಊರಿನಿಂದ ಹೊರಗಿರುವ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಗ್ರಾಮದ ಮತ್ತೊಬ್ಬ ಹಿರಿಯ ಮುಖಂಡ ಸಿದ್ದಪ್ಪ ಮಾತನಾಡಿ, “ನಾವೆಲ್ಲರೂ ಓದಿ ಬಂದಿರುವ ಶಾಲೆ ಇದು. ನಾವೆಲ್ಲರೂ ಇದೇ ಶಾಲೆಯಲ್ಲಿ ಕಲಿತಿದ್ದೇವೆ. ಈಗ ಮಕ್ಕಳನ್ನು ಬೇರೆ ಕಡೆ ಕಳಿಸಿದ್ದಾರೆ ಎಂದರೆ ಶಾಲೆಯ ಅವ್ಯವಸ್ಥೆ ಮತ್ತು ಬೀಳುವ ಹಂತದ ಕಟ್ಟಡ ಇದಕ್ಕೆ ಕಾರಣ. ಒಂದರಿಂದ ಐದನೇ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳುತ್ತಾರೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಾಸಕ್ತಿ ಕಮ್ಮಿಯಾಗುತ್ತಿದ್ದು, ಆಟ-ಪಾಠಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಇಲಾಖೆ ಕ್ರಮವಹಿಸಿ ಕನಿಷ್ಠ ಎರಡು ಮೂರು ಕೋಣೆಗಳನ್ನು ನಿರ್ಮಿಸಿ ಕೊಡಬೇಕು. ಈ ಮೂಲಕ ಈ ಸರ್ಕಾರಿ ಶಾಲೆಯನ್ನು ಉಳಿಸಬೇಕು” ಎಂದು ಒತ್ತಾಯಿಸಿದರು.
ಈ ಬಗ್ಗೆ ಮಾತನಾಡಿದ ಸರ್ಕಾರ ಶಾಲೆ ಉಳಿಸಿ ಆಂದೋಲನದ ಪ್ರಜಾಪರಿವರ್ತನಾ ವೇದಿಕೆ ಮುಖಂಡ ಲಿಂಗರಾಜ್, “ಶಾಲೆಗೆ ಅನುದಾನ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಕೊಠಡಿಯ ಮರು ನಿರ್ಮಾಣಕ್ಕೆ ಇಲಾಖೆಯ ಅಧಿಕಾರಿಗಳು ಗಮನಹರಿಸಿಲ್ಲ. ಅಧಿಕಾರಿಗಳು ಶೀಘ್ರವಾಗಿ ಇದೇ ಜಾಗದಲ್ಲಿ ಉತ್ತಮವಾದ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಡಬೇಕು. ಬಹಳ ದಿನಗಳಿಂದ ಇದು ಅನುಮೋದನೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಅನುಮೋದನೆ ನೀಡಿ ಶಾಲೆಯ ನಿರ್ಮಾಣಕ್ಕೆ ಕೈ ಜೋಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ದಿನ.ಕಾಮ್ ಭೇಟಿ ನೀಡಿದಾಗ, ಶಾಲೆಯ ಶೌಚಾಲಯ ಕೂಡ ಅತ್ಯಂತ ದುಸ್ಥಿತಿಯಲ್ಲಿದ್ದು, ಎಲ್ಲ ಮಕ್ಕಳು ಬಯಲು ಶೌಚಾಲಯ ಉಪಯೋಗಿಸುವ ಸ್ಥಿತಿ ಕಂಡು ಬಂತು. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ವಹಿಸಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ನಿಯೋಜಿತ ದಾವಣಗೆರೆಯ ಕ್ಷೇತ್ರ ಶಿಕ್ಷಣಾಧಿಕಾರಿ ಝಾಕೀರ್ ಅವರನ್ನು ಸಂಪರ್ಕಿಸಿದಾಗ, “ಶಾಲೆಯ ಬಗ್ಗೆ ಮಾಹಿತಿಯಿದ್ದು, ಕೊಠಡಿಯ ನಿರ್ಮಾಣಕ್ಕೆ ನಾವು ಜಿಲ್ಲಾ ಪಂಚಾಯತ್ ಅನುಮೋದನೆಗೆ ಕಳಿಸಿದ್ದೇವೆ ಮತ್ತು ಮೇಲ್ಛಾವಣಿ ಕುಸಿದಿರುವ ಕೋಣೆಗೆ ವಿದ್ಯಾರ್ಥಿಗಳನ್ನು ಕುಳ್ಳಿರಿಸದಂತೆ ಹಿಂದೆಯೇ ತಿಳಿಸಿದ್ದೇವೆ. ಇಂದು ನಡೆದಿರುವ ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಮೇಲಧಿಕಾರಿಗಳಿಗೆ ತಿಳಿಸಿ ಕೊಠಡಿಯ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಸರ್ಕಾರಿ ನೌಕರರು ಕೆಂಪು, ಹಳದಿ ಬಣ್ಣದ ಟ್ಯಾಗ್ ಧರಿಸುವುದು ಕಡ್ಡಾಯ, ಸರ್ಕಾರ ಆದೇಶ
ಒಟ್ಟಿನಲ್ಲಿ, ದಾವಣಗೆರೆ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಒಂದರ ಹಿಂದೆ ಇದ್ದಂತೆ ಒಂದರಂತೆ ಎರಡು ಶಾಲೆಗಳ ಮೇಲ್ಚಾವಣಿಗಳು ಕುಸಿದು ಬಿದ್ದಿದ್ದು, ಪೋಷಕರು ತಮ್ಮ ಮಕ್ಕಳನ್ನು ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗೆ ಕಳುಹಿಸಲು ಹಿಂಜರಿಯುವ ಮತ್ತು ಅನುಮಾನ ವ್ಯಕ್ತಪಡಿಸುವ ಸ್ಥಿತಿ ಉಂಟಾಗಿದೆ. ದುಸ್ಥಿತಿಯಲ್ಲಿರುವ ಎಲ್ಲ ಶಾಲೆಗಳ ಬಗ್ಗೆ ವರದಿ ತರಿಸಿ, ಸೂಕ್ತ ಕ್ರಮ ಕೈಗೊಂಡು ಶಾಲೆಗಳಿಗೆ ಉತ್ತಮ ವ್ಯವಸ್ಥೆ ಮತ್ತು ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರು ಮತ್ತು ಈ ದಿನ.ಕಾಮ್‌ನ ಮನವಿಯಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು