ದಾವಣಗೆರೆ ನಗರದಲ್ಲಿ ಕಳೆದ ಎರಡು ದಿನದಿಂದ 25ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗಿದ್ದು, ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಬೇಜವಾಬ್ದಾರಿ ವರ್ತನೆಯಿಂದ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್ ಆಪಾದಿಸಿದ್ದಾರೆ.
ಹರಿಹರದ ರಾಜನಹಳ್ಳಿ ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರು ಪೂರೈಸಲು 2 ತಿಂಗಳುಗಳ ಮುನ್ನವೇ ನಗರದಲ್ಲಿ ಕುಡಿಯುವ ನೀರಿನ ಅವಶ್ಯಕತೆ ಅನುಗುಣವಾಗಿ ನೀರನ್ನು ಸಂಗ್ರಹಿಸಬೇಕಾಗಿದ್ದ ಪಾಲಿಕೆ ಕಣ್ಣುಮುಚ್ಚಿ ಕುಳಿತ ತಪ್ಪಿನ ಪರಿಣಾಮವನ್ನು ನಗರದ ನಾಗರಿಕರು ಅನುಭವಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರಿನ ಸಂಗ್ರಹಗಾರಗಳು ಬರಿದಾಗಿದ್ದು, ಪ್ರತೀ ದಿನ ಕನಿಷ್ಠ 60ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ರಾಜನಹಳ್ಳಿ ಕೆರೆ ಬರಿದಾಗಿದೆ. ಕುಂಡವಾಡ ಕೆರೆಯಲ್ಲೂ ಮತ್ತು ಟಿವಿ ಸ್ಟೇಷನ್ ಕೆರೆಯೂ ಕನಿಷ್ಠ ನೀರಿನ ಮಟ್ಟ ತಲುಪಿ ಬರಿದಾಗಿದೆ ಎಂದು ಅವರು ಅಸಹನೆ ವ್ಯಕ್ತಪಡಿಸಿದರು.
ಜನವರಿ ತಿಂಗಳಲ್ಲೇ ಜಿಲ್ಲಾಡಳಿತಕ್ಕೆ ಭದ್ರಾ ನೀರನ್ನು ಹರಿಸಿ ಬೇಸಿಗೆಗೆ ಅಗತ್ಯವಿರುವ ನೀರನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಎರಡು ಬಾರಿ ಮನವಿ ಸಲ್ಲಿಸಲಾಯಿತು ಮತ್ತು ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ದುರ್ಗಾಂಬಿಕಾ ಜಾತ್ರೆ ಮತ್ತು ಬೇಸಿಗೆಗೆ ಕುಡಿಯುವ ನೀರಿನ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿದರು ಸಹ, ಜನರ ಮೂಲಭೂತ ಸಮಸ್ಯೆಗಳಿಗೆ ಕಿವಿ ಕೊಡಬೇಕಿದ್ದ ಕಾಂಗ್ರೆಸ್‌ನ ಆಡಳಿತ ಅಧಿಕಾರದ ಮಜವಾದಿತನವನ್ನು ಪ್ರದರ್ಶನ ಮಾಡುತ್ತಾ ನಗರದ ಜನರಿಗೆ ಬರದ ಗ್ಯಾರಂಟೀ ನೀಡಿದೆ. ಕನಿಷ್ಠ ಕುಡಿಯುವ ನೀರನ್ನು ಕೊಡದ ಕಾಂಗ್ರೆಸ್ ಜನರ ಮನೆಗಳಲ್ಲಿ ನೀರಿನ ಕೊಡಗಳು ಬರಿದಾಗಲಿವೆ ಎಂಬುದನ್ನು ಖಚಿತ ಪಡಿಸಿದೆ ಎಂದು ದೂರಿದರು.
ಈ ಕೂಡಲೇ ಜಿಲ್ಲಾಡಳಿತ ಮತ್ತು ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಮುಂದಿನ 45 ದಿನಗಳಿಗೆ ಅವಶ್ಯಕವಿರುವ ನೀರನ್ನು ಡ್ಯಾಮ್‌ನಿಂದ ನದಿಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇನ್ನೆರಡು ದಿನಗಳಲ್ಲಿ ನೀರಿನ ವ್ಯತ್ಯಯ ಉಂಟಾದ ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಪೂರೈಸಲು ಅನ್ಯ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಒಂದು ವೇಳೆ ಪಾಲಿಕೆ ಮತ್ತು ಜಿಲ್ಲಾಡಳಿತ ಕುಡಿಯುವ ನೀರು ಪೂರೈಸಲು ವಿಫಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಾಜಿ ಮೇಯರ್ ಎಸ್.ಪಿ ವೀರೇಶ್, ಉಪ ಮಹಾ ಪೌರರಾದ ಯಶೋಧ ಹೆಗ್ಗಪ್ಪ, ಪಾಲಿಕೆ ಸದಸ್ಯರಾದ ಆರ್.ಶಿವಾನಂದ್, ಎಲ್.ಡಿ. ಗೋಣ್ಯಪ್ಪ, ಕೆ.ಎಂ. ವೀರೇಶ್, ಶಾಂತ್ ಕುಮಾರ್ ಸೋಗಿ, ಶಿವಪ್ರಕಾಶ್, ತಂಡ ಮತ್ತು ಬಿಜೆಪಿ ಇತರೆ ಬಿಜೆಪಿ ಪಾಲಿಕೆ ಸದಸ್ಯರು ಹಾಜರಿದ್ದರು.
