ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ರಾಜ್ಯಾದ್ಯಂತ ನೆಡೆಸುತ್ತಿರುವ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ತಾಲೂಕು ಕಚೇರಿ ಮುಂಬಾಗ ಕುವೆಂಪು ಪುತ್ಥಳಿ ಬಳಿ ಡಾ. ಬಿ ಆರ್ ಅಂಬೇಡ್ಕರ್, ಮಹಾತ್ಮಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆಗೆ ಮುಂದಾಗಿದ್ದಾರೆ.
“ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು, ಅಂತರ್ ಜಿಲ್ಲಾ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರೂಪಿಸಬೇಕು. ನ್ಯಾಯಲಯ ಪ್ರಕರಣ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದ ಬಡ್ತಿ ತಡೆಹಿಡಿಯಲಾಗಿದೆ. ಸರ್ಕಾರ ಪ್ರಕರಣ ಇತ್ಯರ್ಥ ಮಾಡಿ ಬಡ್ತಿಗೆ ಅವಕಾಶ ಮಾಡಿಕೊಡಬೇಕು, ಗ್ರಾಮ ಆಡಳಿತಾಧಿಕಾರಿಗಳದ್ದು ತಾಂತ್ರಿಕ ಹುದ್ದೆಯೆಂದು ಪರಿಗಣಿಸಬೇಕು” ಎಂದು ಒತ್ತಾಯಿಸಿದರು.

ಈ ವೇಳೆ ಜಗಳೂರು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್ ಅರುಣ್ ಕುಮಾರ್ ಈ ದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿ, “2024 ಸೆ.26ರಿಂದ ಅಕ್ಟೋಬರ್ 3ರವರೆಗೆ ನಡೆದ ರಾಜ್ಯವ್ಯಾಪಿ ಮುಷ್ಕರದಂದು ನಡೆಸಲಾಗಿದ್ದ ಮೊದಲ ಹಂತದ ಪ್ರತಿಭಟನೆಯಲ್ಲಿ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಭರವಸೆಯಂತೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ಈ ವೃಂದದ ನೌಕರರ ಬೇಡಿಕೆ ಈವರೆಗೂ ಈಡೇರಿಸಿಲ್ಲ. ಅಲ್ಲದೆ ಪ್ರತಿಭಟನೆ ಪೂರ್ವಕ್ಕಿಂತಲೂ ಅಧಿಕ ಕಾರ್ಯಭಾರದ ಒತ್ತಡ ಉಂಟಾಗಿದೆ. ಕೂಡಲೇ ತಾಂತ್ರಿಕ ಸಮಸ್ಯೆ ಈಡೇರಿಸಬೇಕು. ಕಚೇರಿಗಳಿಗೆ ಮೂಲಸೌಕರ್ಯ ಒದಗಿಸಬೇಕು. ಅನುಕಂಪದ ನೇಮಕಾತಿ ವೃಂದ ಮತ್ತು ನೇಮಕಾತಿ ತಿದ್ದುಪಡಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಘನತೆಯ ಸಾವಿನ ಹಕ್ಕು; ಕರ್ನಾಟಕದ ಮೊದಲ ಫಲಾನುಭವಿಯಾಗಲು ನಿವೃತ್ತ ಶಿಕ್ಷಕಿ ಕರಿಬಸಮ್ಮ ತವಕ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿನಾಯಕ, ಪದಾಧಿಕಾರಿಗಳಾದ ಮಹೇಶ್, ಶಿವರಾಜ್, ಮಲ್ಲಿಕಾರ್ಜುನ್, ದಿಲೀಪ್, ಕೋಟೆಪ್ಪ, ಕೊಟ್ರೇಶ್, ಮಾರುತಿ, ಕೆ ಹೆಚ್ ನೇತ್ರಾಬಾಯಿ, ಸರ್ವಶ್ರೀ, ಸುವರ್ಣ, ಕೀರ್ತಿಕುಮಾರಿ ಸೇರಿದಂತೆ ಹಲವರು ಇದ್ದರು.