ಮಾದಕ ವಸ್ತುಗಳು ಹಾಗೂ ಮಾದಕ ದ್ರವ್ಯಗಳು ಇಂದಿನ ಯೋಜನತೆಗೆ ಮಾರಕವಾಗಿ ಪರಿಣಮಿಸಿದ್ದು ಇವುಗಳ ಬಗ್ಗೆ ಎಚ್ಚೆತ್ತುಕೊಂಡು ಅವುಗಳನ್ನು ದೂರವಿಡುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿರುವ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಮಾದಕ ದ್ರವ್ಯಗಳ ಮಾರಾಟ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಳೆದ ಆಗಸ್ಟ್ ಮತ್ತು ಡಿಸೆಂಬರ್ ನಲ್ಲಿ ನಡೆಸಲಾದ ಅಪರಾಧ ತಡೆ ಮಾಸ ಆಚರಣೆ ವೇಳೆ ವಿದ್ಯಾರ್ಥಿಗಳು ಸಹ ಮಾದಕ ದ್ರವ್ಯಗಳ ವ್ಯಸನಿಗಳಾಗಿರುವುದು ಕಂಡುಬಂದಿರುವ ನಿಟ್ಟಿನಲ್ಲಿ ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಜನತೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಂತೋಷ ಇತರರು ಇದ್ದರು. ಕಾಲ್ನಡಿಗೆ ಜಾಥಾವು ಗುಂಡಿ ಮಹಾದೇವಪ್ಪ ವೃತ್ತದಿಂದ ಸಾಗಿ ಸಿ.ಜಿ.ಆಸ್ಪತ್ರೆ ಮುಂಭಾಗ, ಶಾಂತವೇರಿ ಗೋಪಾಲಗೌಡ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಜಯದೇವ ವೃತ್ತ ತಲುಪಿ ಸಮಾರೋಪಗೊಂಡಿತು.